ಬೆಂಗಳೂರು: ಸಂಚಾರ ದಟ್ಟಣೆ ಸಮಸ್ಯೆಯಿಂದ ಬಳಲುತ್ತಿರುವ ಬೆಂಗಳೂರು ಮಹಾನಗರದ ಜನತೆಗೆ ಕೇಂದ್ರ ಸರ್ಕಾರವು ಸಿಹಿ ಸುದ್ದಿ ನೀಡಿದೆ. ಔಟರ್ ರಿಂಗ್ ರೋಡ್ ಮತ್ತು ಏರ್ಪೋರ್ಟ್ ಮಾರ್ಗಗಳ ಮೆಟ್ರೋ ಹಾಗೂ ಸಬ್ ಅರ್ಬನ್ ರೈಲು ಯೋಜನೆಯ ಅನುಮೋದನೆಯಿಂದ ನಗರವು 'ಫಾಸ್ಟ್ ಟ್ರ್ಯಾಕ್'ಗೆ ಅಡಿಯಿಡಲಿದೆ ಎಂದು ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಹೇಳಿದರು.
ಸೌತ್ ಎಂಡ್ ವೃತ್ತದಲ್ಲಿರುವ ಸಂಸದರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕ್ಯಾಬಿನೆಟ್ ಸಮಿತಿಯು ಬೆಂಗಳೂರು ಮೆಟ್ರೋ ಹಂತ 2A & 2Bಗೆ ಅನುಮೋದನೆ ನೀಡಿದೆ. ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರಂ( ಹಂತ 2A) ಮತ್ತು ಕೆ.ಆರ್. ಪುರಂನಿಂದ ಹೆಬ್ಬಾಳ ಮಾರ್ಗವಾಗಿ ಏರ್ಪೋರ್ಟ್ ( ಹಂತ 2B) ಮಾರ್ಗವು 14,788 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಲಿದೆ ಎಂದರು.
ಯೋಜನೆಯ ಮಹತ್ವ ಕುರಿತು ವಿವರಿಸಿದ ಸಂಸದ ತೇಜಸ್ವಿ ಸೂರ್ಯ, ಭಾರತದ 167 ಬಿಲಿಯನ್ ಡಾಲರ್ಗಳ ಐಟಿ ಆದಾಯದಲ್ಲಿ ಬೆಂಗಳೂರು ನಗರವು ಶೇ. 40ರಷ್ಟು ಪಾಲು ಹೊಂದಿದೆ. ಔಟರ್ ರಿಂಗ್ ರೋಡ್ನಲ್ಲಿರುವ ಐಟಿ ಕಂಪನಿಗಳಿಂದಲೇ ಶೇ. 32ರಷ್ಟು ಕೊಡುಗೆಯಿದ್ದು, ಸದರಿ 17 ಕಿ.ಮೀ. ಮಾರ್ಗವು ಮೆಟ್ರೋ ರೈಲು ಸೌಲಭ್ಯದಿಂದ ವಂಚಿತವಾಗಿತ್ತು. ನಿಯಮಿತ ಸಾರಿಗೆ ಆಯ್ಕೆಗಳ ಅನ್ವಯ ಬೆಂಗಳೂರು ನಗರದಲ್ಲಿ 2008-2020ರ ಅವಧಿಯಲ್ಲಿ 53 ಲಕ್ಷ ಖಾಸಗಿ ವಾಹನಗಳ ಸೇರ್ಪಡೆಯಾಗಿದ್ದನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಬಹುದು ಎಂದರು.
ಹಲವು ಕಂಪನಿಗಳ 5.5 ಲಕ್ಷ ಉದ್ಯೋಗಿಗಳು ಸಂಚರಿಸಲಿರುವ ಈ ಮಾರ್ಗದಲ್ಲಿ ಸರಾಸರಿ ವಾಹನ ವೇಗವು ಪ್ರತಿ ಗಂಟೆಗೆ 4 ಕಿ.ಮೀ. ಮಂದಗತಿಗೆ ಇಳಿದಿರುವುದು ಈ ಮಾರ್ಗದ ಸಂಚಾರ ದಟ್ಟಣೆಗೆ ಹಿಡಿದ ಕೈಗನ್ನಡಿ. ಈ ಯೋಜನೆಯ ಪ್ರಾಮುಖ್ಯತೆ, ತ್ವರಿತಗತಿಯ ಅನುಮೋದನೆಗೆ ಸಂಬಂಧಿಸಿದಂತೆ ಕೇಂದ್ರ ನಗರಾಭಿವೃದ್ಧಿ ಸಚಿವ ಹರ್ದೀಪ್ ಸಿಂಗ್ ಪುರಿ, ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್ರನ್ನು ಹಲವು ಬಾರಿ ಭೇಟಿಯಾಗಿದ್ದು, ಯೋಜನೆಯ ಲಿಖಿತ ಮಾದರಿಗಳೊಂದಿಗೆ ವಿವರಿಸಿರುವ ಕುರಿತು ತಿಳಿಸಿದರು.
ಸಬ್ ಅರ್ಬನ್ ರೈಲು ಮತ್ತು ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ ಬೆಂಗಳೂರು ನಗರದ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಕಾಣಲಿದ್ದು, ಕೇಂದ್ರ ಸರ್ಕಾರಕ್ಕೆ ನನ್ನ ಧನ್ಯವಾದಗಳನ್ನು ತಿಳಿಸುತ್ತೇನೆ. ಮೆಟ್ರೋ ಹಂತ 2A & 2B ಮಾರ್ಗಗಳ ಅನುಷ್ಠಾನದಿಂದ ಏರ್ಪೋರ್ಟ್ಗೆ ತೆರಳುವ ಸಾವಿರಾರು ನಾಗರಿಕರಿಗೆ ಅನುಕೂಲವಾಗಲಿದೆ. ಕೆ.ಆರ್.ಪುರಂ, ಯಲಹಂಕ ಮತ್ತು ಹೆಬ್ಬಾಳ ರೈಲ್ವೆ ನಿಲ್ದಾಣಗಳಲ್ಲಿನ ಇಂಟರ್ ಚೇಂಜ್ ವ್ಯವಸ್ಥೆಯಿಂದ ಟ್ರಾಫಿಕ್ ಹಾಟ್ ಸ್ಪಾಟ್ಗಳಲ್ಲಿ ಸಂಚಾರ ಸಮಸ್ಯೆಗೆ ಕಡಿವಾಣ ಬೀಳಲಿದ್ದು, ಹೊಸೂರು ರಸ್ತೆ, ಸರ್ಜಾಪುರ, ವೈಟ್ ಫೀಲ್ಡ್, ಓಲ್ಡ್ ಮದ್ರಾಸ್ ರಸ್ತೆ ಮತ್ತು ಬಳ್ಳಾರಿ ರಸ್ತೆಗಳಲ್ಲಿನ ಸಂಚಾರ ವ್ಯವಸ್ಥೆ ಕೂಡ ಸರಾಗವಾಗಿ ತೆರಳಲು ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಬೆಂಗಳೂರು ನಗರದ ಸಾರಿಗೆ ವ್ಯವಸ್ಥೆಯಲ್ಲಿ ಇವೆರಡೂ ಮೆಟ್ರೋ ಮಾರ್ಗಗಳ ಅನುಷ್ಠಾನದಿಂದ ಬೆಂಗಳೂರಿನ ಸಮಗ್ರ, ಔದ್ಯೋಗಿಕ, ಆರ್ಥಿಕ ಅಭಿವೃದ್ಧಿಗೆ ಮತ್ತಷ್ಟು ವೇಗ ದೊರಕಲಿದ್ದು, ಸಂಚಾರ ದಟ್ಟಣೆಗೆ ಬ್ರೇಕ್ ಬೀಳಲಿದೆ ಎಂದರು.