ನವದೆಹಲಿ : ಅವರು ಸಿಪಿ ಯೋಗೇಶ್ವರ್ ಅಲ್ಲ, ಸಿಡಿ ಯೋಗೇಶ್ವರ್! ಅವರ ಬಳಿ ಎಲ್ಲರ ದಾಖಲೆಗಳಿವೆ ಎಂದು ಸಂಸದ ಡಿ ಕೆ ಸುರೇಶ್ ಹೇಳಿದ್ದಾರೆ. ಅವರು ಆಗಾಗ್ಗೆ ಒಬ್ಬೊಬ್ಬರನ್ನು ಭೇಟಿ ಮಾಡಿ, ಹೊಸದಿಲ್ಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಒಬ್ಬೊಬ್ಬರ ಮಾಹಿತಿ ಅವರು ಆಗಾಗ ತೋರಿಸುತ್ತಿರುತ್ತಾರೆ. ಇಂದಿನ ರಾಜ್ಯ ಸರ್ಕಾರ ಸಿಡಿ ಸರ್ಕಾರ ಅಂತಲೇ ಹೇಳಬಹುದು ಎಂದು ವ್ಯಂಗ್ಯವಾಡಿದರು.
ಈ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಗೃಹ ಸಚಿವರು ತನಿಖೆ ನಡೆಸಬೇಕು ರಾಜ್ಯ ಬಿಜೆಪಿ ನಾಯಕರೊಬ್ಬರ ಬಳಿ 500 ಸಿಡಿಗಳಿವೆ ಎಂದು ಮಾಧ್ಯಮಗಳಲ್ಲಿ ನೋಡಿದೆ. ಎಲ್ಲರೂ ಸಿಡಿಗಳ ಮೇಲೆ ಅಧಿಕಾರ ಹಿಡಿಯುವ ಪ್ರಯತ್ನ ಮಾಡುತ್ತಿರುವುದು ರಾಜ್ಯಕ್ಕೆ ಬಹುದೊಡ್ಡ ಕಪ್ಪುಚುಕ್ಕೆಯಾಗಿದೆ. ರಾಜ್ಯದ ಜನ ಇಂತಹವರನ್ನು ಕ್ಷಮಿಸಬಾರದು. ಯಾವುದೇ ಪಕ್ಷದವರಾದರೂ ಅವರ ಮೇಲೆ ಮುಂದಿನ ದಿನಗಳಲ್ಲಿ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಕಾಂಗ್ರೆಸ್ 2023ರ ಚುನಾವಣೆ ಬಗ್ಗೆ ಚಿಂತನೆ, ತಯಾರಿ ನಡೆಸುತ್ತಿದೆ. ಬೇರೆಯವರು ಕಾಂಗ್ರೆಸ್ ಹೆಸರು ಹೇಳಿಕೊಂಡು ರಾಜಕೀಯ ಲಾಭ ಪಡೆಯಬಹುದು ಅಷ್ಟೇ.. ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬುದು ಜನರ, ಎಲ್ಲ ಕಾರ್ಯಕರ್ತರ ಆಶಯ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು ಎಂಬುದಷ್ಟೇ ನಮ್ಮ ಗುರಿ. ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಯಾವುದೇ ಪ್ರಯತ್ನ ಮಾಡಿರಲಿಲ್ಲ. ಪಕ್ಷ ಅವರನ್ನು ಗುರುತಿಸಿ ಅವರಿಗೆ ಈ ಜವಾಬ್ದಾರಿ ನೀಡಿದೆ ಎಂದರು.
ನಾನು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದು ಕಾರ್ಯಕರ್ತರು ವಿಧಾನಸೌಧದ ಮೆಟ್ಟಿಲೇರಲು ಚಪ್ಪಡಿ ಕಲ್ಲಾಗಿರಲು ಬಯಸುತ್ತೇನೆ ಎಂದು ಶಿವಕುಮಾರ್ ಎಲ್ಲ ಸಂದರ್ಭದಲ್ಲೂ ಹೇಳಿದ್ದಾರೆ. ಪಕ್ಷದಲ್ಲಿ ಸಾಮೂಹಿಕ ನಾಯಕತ್ವ ಪ್ರಮುಖವಾದುದು. ಇದು ಕಾಂಗ್ರೆಸ್ ಇತಿಹಾಸ. ಕಾಂಗ್ರೆಸ್ ಎಂದಿಗೂ ಒಬ್ಬರ ಹೆಸರಿನ ಮೇಲೆ ಚುನಾವಣೆ ಮಾಡಿಲ್ಲ. ಎಲ್ಲರೂ ಸೇರಿ ಪಕ್ಷವನ್ನು ಅಧಿಕಾರಕ್ಕೆ ತರುವ ಜವಾಬ್ದಾರಿ ಇದೆ ಎಂದರು.
ಮುಚ್ಚಿಡುವ ಪ್ರಯತ್ನ : ಕೋವಿಡ್ ಪಿಡುಗಿನಲ್ಲಿ ಆಕ್ಸಿಜನ್ ಕೊರತೆಯಿಂದ ಸತ್ತಿರುವ ಪ್ರಕರಣ ಕೇವಲ ಚಾಮರಾಜನಗರದಲ್ಲಿ ಮಾತ್ರ ಬೆಳಕಿಗೆ ಬಂದಿದೆ. ದೇಶದೆಲ್ಲೆಡೆ ಇಂತಹದ್ದು ನಡೆದಿದ್ದು, ಕೇಂದ್ರ ಸರ್ಕಾರ ಇದನ್ನು ಮುಚ್ಚಿಡುವ ಪ್ರಯತ್ನ ಮಾಡಿದೆ.
ದೆಹಲಿಯಲ್ಲೂ ಜನ ರಸ್ತೆಯಲ್ಲಿ ಸತ್ತಿರುವುದನ್ನು ನಾವು ನೋಡಿದ್ದೇವೆ. ಲೋಕಸಭೆಯಲ್ಲಾಗಲಿ ಅಥವಾ ರಾಜ್ಯಸಭೆಯಲ್ಲಾಗಲಿ ಉತ್ತರ ನೀಡುವ ಸಂದರ್ಭದಲ್ಲಿ ಕೇಂದ್ರ ಸರಕಾರ ಇದನ್ನು ಒಪ್ಪಿಕೊಂಡಿಲ್ಲ. ಜನ ಆಕ್ಸಿಜನ್, ಬೆಡ್ ಹಾಗೂ ಔಷಧಿ ಇಲ್ಲದೆ ಸತ್ತಿದ್ದಾರೆ. ಆದರೂ ಇದನ್ನು ಒಪ್ಪಿಕೊಳ್ಳದಿರುವ ಕೇಂದ್ರ ಸರ್ಕಾರ ಬಡವರ ಜೀವದ ಬಗ್ಗೆ ಎಷ್ಟು ಬೇಜವಾಬ್ದಾರಿತನ ಮೆರೆದಿದೆ, ಎಷ್ಟು ಆಟವಾಡುತ್ತಿದೆ ಎಂಬುದು ಗೊತ್ತಾಗುತ್ತದೆ.
ಇದನ್ನೂ ಓದಿ : ಕಾಂಗ್ರೆಸ್‌ನಲ್ಲಿ ಯಾವುದೇ ಸಮಸ್ಯೆ ಇಲ್ಲ; ಸಾಮೂಹಿಕ ನಾಯಕತ್ವವೇ ಅಂತಿಮ: ಡಿ.ಕೆ ಶಿವಕುಮಾರ್
ಈ ವಿಚಾರದಲ್ಲಿ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ಈ ಪಿಡುಗಿನಲ್ಲಿ ದೇಶವ್ಯಾಪ್ತಿ ಜನ ಸತ್ತಿರುವ ಕಾರಣದ ಬಗ್ಗೆ ಮಾಹಿತಿ ಸಂಗ್ರಹಿಸುವಂತೆ ಆದೇಶ ನೀಡಬೇಕು. ಸತ್ತವರಿಗೆ ಪರಿಹಾರ ಸಿಗುವಂತೆ ಮಾಡಬೇಕು. ಸತ್ತವರ ಮಾಹಿತಿ ಮುಚ್ಚಿಡುವುದು ಮಹಾಪರಾಧ, ಮುಚ್ಚಿಡುವವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಆಗ್ರಹಿಸಿದರು.
ಚಾಮರಾಜನಗರ ಘಟನೆಯನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸುತ್ತೇನೆ. ಸತ್ತವರಿಗೆ ವಿಪತ್ತು ನಿರ್ವಹಣಾ ನಿಧಿಯಿಂದ ಪರಿಹಾರ ಸಿಗುವಂತಾಗಬೇಕು ಎಂದು ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾಜಿ ಸಂಸದ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್ ಧ್ರುವನಾರಾಯಣ್ ಉಪಸ್ಥಿತರಿದ್ದರು.