ಬೆಂಗಳೂರು: ಮೃತ ಪುತ್ರನ ಪಾಲಿನ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿಯೂ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹಾಗಾಗಿ ಮಗನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಅರ್ಹರಾಗುತ್ತಾರೆ ಎಂದು ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.
ಮೃತಪಟ್ಟಿರುವ ಪುತ್ರನ ಪಾಲಿನ ಆಸ್ತಿಯಲ್ಲಿ ಪಾಲು ಪಡೆಯಲು ತಾಯಿ ಹಕ್ಕು ಹೊಂದಿಲ್ಲ ಎಂದು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್ ನ್ಯಾಯಾಲಯ ಹೊರಡಿಸಿದ್ದ ಆದೇಶ ಪ್ರಶ್ನಿಸಿ ಟಿ.ಎನ್. ಸುಶೀಲಮ್ಮ ಎನ್ನುವವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆಯು ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್ ಅವರಿದ್ದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠದಲ್ಲಿ ನಡೆಯಿತು.
ವಿಚಾರಣೆ ವೇಳೆ ಪ್ರತಿವಾದ ಮಂಡಿಸಿದ ಪ್ರತಿವಾದಿಗಳ ಪರ ವಕೀಲರು, ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಸಮರ್ಥಿಸಿಕೊಂಡರು. ಮೇಲ್ಮನವಿದಾರರಾದ ಸುಶೀಲಮ್ಮ ಅವರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು ಹಂಚಿಕೆ ಮಾಡುವ ವೇಳೆಗಾಗಲೇ ಅವರ ಮಗ ನಿಧನರಾಗಿದ್ದರು. ಹಾಗಾಗಿ ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡುವ ಅಗತ್ಯವಿಲ್ಲ, ಸೆಷನ್ಸ್ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸಬೇಕು ಎಂದು ಮನವಿ ಮಾಡಿದರು.
ಆದರೆ, ಪ್ರತಿವಾದಿಗಳ ವಾದವನ್ನು ತಳ್ಳಿ ಹಾಕಿದ ಹೈಕೋರ್ಟ್, ಅರ್ಜಿಯಲ್ಲಿ ಸುಶೀಲಮ್ಮ ಅವರನ್ನು ಒಮ್ಮೆ ಪಕ್ಷಕಾರರನ್ನಾಗಿ ಮಾಡಿದ ಮೇಲೆ ಅವರೂ ಪುತ್ರ ಸಂತೋಷ್ ಅವರ ಮೊದಲನೇ ವರ್ಗದ ವಾರಸುದಾರರು ಎನಿಸಲಿದ್ದಾರೆ. ಸಂತೋಷ್ ಅವರು ತಾಯಿ, ಪತ್ನಿ ಮತ್ತು ಪುತ್ರನನ್ನು ಅಗಲಿದ್ದು, ಹಿಂದೂ ಅವಿಭಾಜ್ಯ ಕುಟುಂಬದಲ್ಲಿ ಸುಶೀಲಮ್ಮ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ. ಹೀಗಾಗಿ, ಸಂತೋಷ್ ಅವರ ಆಸ್ತಿಯಲ್ಲಿ ಪಾಲು ಪಡೆಯಲು ಮೂಲ ಮೇಲ್ಮನವಿದಾರರಾದ ಸುಶೀಲಮ್ಮ ಅರ್ಹರಾಗಿದ್ದಾರೆ. ಹಾಗಾಗಿ ಸೆಷನ್ಸ್ ನ್ಯಾಯಾಲಯದ ನಡೆ ದೋಷಪೂರಿತವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿತು.
ಅಂತೆಯೇ, ಸೆಷನ್ಸ್ ನ್ಯಾಯಾಲಯದ ಆದೇಶದಲ್ಲಿ ಮಾರ್ಪಾಡು ಮಾಡಿ ಮೃತ ಪುತ್ರ ಸಂತೋಷ್ ಅವರ ಪಿತ್ರಾರ್ಜಿತ ಆಸ್ತಿಯಲ್ಲಿ ತಾಯಿ ಸುಶೀಲಮ್ಮ ಅವರಿಗೂ ಪಾಲು ಇದೆ, ಅವರು ಕೂಡ ಮೊದಲನೇ ವರ್ಗದ ವಾರಸುದಾರರಾಗುತ್ತಾರೆ ಎಂದು ತೀರ್ಪು ನೀಡಿ ಮೇಲ್ಮನವಿದಾರರ ಮನವಿಯನ್ನು ಪುರಸ್ಕರಿಸಿ ಆದೇಶ ನೀಡಿತು.
ಹಿಂದೂ ಉತ್ತರಾಧಿಕಾರಿ ಕಾಯ್ದೆಯಂತೆ, ಅರ್ಜಿದಾರರಿಗೆ ಪತಿ ಇದ್ದರೂ ಕೂಡ ಮೃತ ಪುತ್ರನ ಆಸ್ತಿಗೆ ಅವರೇ ಮೊದಲ ವಾರಸುದಾರರು. ಇದನ್ನು ಟ್ರಯಲ್ ಕೋರ್ಟ್ ಪರಿಗಣಿಸಿಲ್ಲ. ತಾಯಿ ಕೂಡ ಆಸ್ತಿಯಲ್ಲಿ ಸಮಾನ ಪಾಲುದಾರರಾಗಿದ್ದಾರೆ ಎಂದು ಕೋರ್ಟ್ ತಿಳಿಸಿದೆ.
ಈ ಹಿಂದೆ ಸುಪ್ರೀಂ ಕೋರ್ಟ್ ನೀಡಿದ್ದ ಆದೇಶ: ಹಿಂದೂ ಉತ್ತರಾಧಿಕಾರಿ (ತಿದ್ದುಪಡಿ) ಕಾಯಿದೆ-2005ಯಂತೆ ತಂದೆಯ ಆಸ್ತಿಯಲ್ಲೀ ಹೆಣ್ಣು ಮಕ್ಕಳು ಕೂಡ ಸಮಾನ ಹಕ್ಕು ಹೊಂದಿರುತ್ತಾರೆ ಎಂದು ಈ ಮೊದಲು ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿತ್ತು.
ಇದನ್ನೂ ಓದಿ: ಕಾರ್ಮಿಕ ನ್ಯಾಯಾಲಯದ ಪೀಠಾಧಿಕಾರಿ ನೇಮಕ ವಿಳಂಬವಾದರೆ 10 ಲಕ್ಷ ರೂ ದಂಡ: ಕೆಂದ್ರ ಸರ್ಕಾರಕ್ಕೆ ಹೈಕೋರ್ಟ್ ಎಚ್ಚರಿಕೆ