ಬೆಂಗಳೂರು: ಮಕ್ಕಳೆದುರೇ ತಾಯಿವೋರ್ವಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಬೆಳಕಿಗೆ ಬಂದಿದೆ.
ಚಂದ್ರಲೇಔಟ್ನ ಆರುಂಧತಿ ನಗರದಲ್ಲಿ ಫಾತೀಮಾ (30) ಮಕ್ಕಳದೊಂದಿಗೆ ವಾಸಿಸುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಗಲ್ಫ್ ಕಂಟ್ರಿ, ದುಬೈ, ಕುವೈತ್ನಲ್ಲಿ ಮನೆ ಕೆಲಸ ಮಾಡ್ತಾ ತನ್ನ ಬ್ಯಾಂಕಿಗೆ ಹಣ ಜಮಾವಣೆ ಮಾಡ್ತಿದ್ರು. ಆದರೆ ಇತ್ತೀಚೆಗೆ ಬ್ಯಾಂಕ್ ಹಣ ಪರಿಶೀಲಿಶಿದಾಗ ಹಣ ಖಾಲಿಯಾಗಿರುವುದು ಬೆಳಕಿಗೆ ಬಂದಿದೆ.
ಫಾತೀಮಾ ಸಂಪಾದಿಸಿದ ಹಣವನ್ನೆಲ್ಲ ತಾಯಿ ರಫೀಕಾ ಬೇಗಂ, ಅಣ್ಣ ಜಾಫರ್, ಅಣ್ಣನ ಪತ್ನಿ ಸಮೀನಾ, ಅಕ್ಕ ಆಯೇಷಾ ಬಾನು ಮತ್ತು ಆಕೆಯ ಪುತ್ರ ಸೈಯದ್ ಕಲೀಲ್ ದುರ್ಬಳಕೆ ಮಾಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ. ಹಣ ವಾಪಸ್ ಕೇಳಿದ್ರೂ ಪ್ರಯೋಜನವಾಗಿಲ್ಲ. ಹೀಗಾಗಿ ಫಾತೀಮಾ ತನ್ನ ಕುಟುಂಬಸ್ಥರ ಮೇಲೆ ಪೊಲೀಸರಿಗೆ ದೂರು ನೀಡಿದ್ದರು.
ದೂರು ದಾಖಲಿಸಿಕೊಂಡ ಪೊಲೀಸರು ಫಾತೀಮಾಳಿಗೆ ನ್ಯಾಯ ಕೊಡಿಸಲಿಲ್ಲ. ಇದರಿಂದ ಮನನೊಂದ ಫಾತೀಮಾ ತನ್ನ ಮಕ್ಕಳ ಎದುರು ಸೆಲ್ಫಿ ವಿಡಿಯೋ ಮಾಡಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯ ವಿಷಸೇವಿಸಿ ಅಸ್ವಸ್ಥಳಾದ ಫಾತೀಮಾರನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದ್ದಾರೆ.
ಫಾತೀಮಾ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಸೆಲ್ಫಿ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿದೆ. ಕೂಡಲೇ ಹಿರಿಯಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳುವಂತೆ ಚಂದ್ರಲೇಔಟ್ ಪೊಲೀಸರಿಗೆ ಸೂಚಿಸಿದ್ದಾರೆ. ಈ ಘಟನೆ ಕುರಿತು ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.