ಬೆಂಗಳೂರು : ರಾಜ್ಯ ವಿಧಾನಸಭೆ ಚುನಾವಣೆ ಇನ್ನು ಐದು ತಿಂಗಳಷ್ಟೇ ಬಾಕಿ ಇರುವಾಗಲೇ ಮೂರು ಪಕ್ಷಗಳಲ್ಲಿ ರಾಜಕೀಯದ ಚುಟುವಟಿಕೆಗಳು ಆರಂಭವಾಗಿವೆ. ಜೆಡಿಎಸ್ ಪಂಚರತ್ನ ರಥಯಾತ್ರೆ ನಡೆಸುವ ಮೂಲಕ ಚುನಾವಣಾ ಪ್ರಚಾರಕ್ಕೆ ಇಳಿದಿದ್ದರೆ, ಕಾಂಗ್ರೆಸ್ ನವರು ಸದ್ದಿಲ್ಲದೆ ಸಭೆಗಳು ಹಾಗೂ ಪ್ರವಾಸ ನಡೆಯುತ್ತಿದ್ದಾರೆ. ಇನ್ನು ಸರ್ಕಾರ ನಡೆಯುತ್ತಿರುವ ಬಿಜೆಪಿ ನಾಯಕರು ತಮ್ಮ ಕ್ಷೇತ್ರಗಳ ಕಡೆ ಚಿತ್ತ ಹರಿಸಿದ್ದಾರೆ. ಹಾಗಾಗಿ ಸಚಿವರು ವಿಧಾನಸೌಧಕ್ಕೆ ಬರುವುದು ಕಡಿಮೆಯಾಗಿದೆ.
ಸಚಿವ ಸಂಪುಟ ಸಭೆ ಅಥವಾ ಇಲಾಖೆ ಸಭೆಗಳಿದ್ದಾಗ ಮಾತ್ರ ವಿಧಾನಸೌಧದಲ್ಲಿ ಕಾಣಿಸಿಕೊಳ್ಳುವ ಸಚಿವರು, ನಂತರ ಪ್ರವಾಸದ ನೆಪದಲ್ಲಿ ಕ್ಷೇತ್ರಗಳಿಗೆ ತೆರಳಿ ಅಲ್ಲಿ ಕಾರ್ಯಕ್ರಮಗಳನ್ನು ಮಾಡುವ ಕಡೆ ಚಿತ್ತ ಹರಿಸುತ್ತಿದ್ದಾರೆ. ವಾರದಲ್ಲಿ ಕನಿಷ್ಠ ಎರಡು, ಮೂರು ದಿನವಾದರೂ ಪ್ರತಿ ಸಚಿವರು ವಿಧಾನಸೌಧದಲ್ಲಿ ಸಿಗಬೇಕೆಂದು ಸೂಚನೆ ನೀಡಿದ್ದರೂ, ಈ ಸೂಚನೆಯನ್ನು ಪಾಲನೆ ಮಾಡುತ್ತಿರುವವರು ಬೆರಳೆಣಿಕೆಯಷ್ಟು ಮಾತ್ರ.
ಸಚಿವರಾದ ಸಂದರ್ಭದಿಂದ ಬೇರೆ ಜವಾಬ್ದಾರಿಗಳ ಕಾರಣದಿಂದ ಕ್ಷೇತ್ರ ಹಳ್ಳಿಗಳಿಗೆ ಭೇಟಿ ನೀಡಿಲ್ಲ. ಜನರನ್ನು ಮಾತನಾಡಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಉಳಿದಿರುವ ಅವಧಿಯಲ್ಲಿ ಕ್ಷೇತ್ರದಲ್ಲಿ ಪ್ರವಾಸ ಮಾಡುವುದು, ನಮ್ಮ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆ ಮಾಡುವುದು ಮತ್ತು ಹೊಸ ಯೋಜನೆಗಳಿಗೆ ಅಡಿಗಲ್ಲು ಇಡುವ ಕೆಲಸವನ್ನು ತ್ವರಿತಗತಿಯಲ್ಲಿ ಮಾಡಬೇಕಾಗಿದೆ. ಆದ್ದರಿಂದ ಕ್ಷೇತ್ರಕ್ಕೆ ಹೆಚ್ಚಿನ ಸಮಯ ಕೊಡುವುದು ಅನಿವಾರ್ಯವಾಗಿದೆ ಎಂದು ಹಲವು ಸಚಿವರು ಮೌಖಿಕವಾಗಿ ವಿವರಣೆ ನೀಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಕ್ಷೇತ್ರದಲ್ಲಿ ಒಳ್ಳೆ ಕೆಲಸ ಮಾಡದೆ ಬೇರೆ ಕಡೆ ಹೋಗುತ್ತಿದ್ದಾರೆ: ಸಿದ್ದರಾಮಯ್ಯ ಬಗ್ಗೆ ಬಿಎಸ್ವೈ ವ್ಯಂಗ್ಯ