ಬೆಂಗಳೂರು: ವಿದ್ಯಾಪೀಠದ ರಸ್ತೆಯಲ್ಲೇ ಕುಳಿತ ಕೆಲವು ಭಕ್ತರು ಶ್ರೀಗಳ ಅಂತಿಮ ವಿಧಿವಿಧಾನ ಕಾರ್ಯಗಳನ್ನು ಕಣ್ತುಂಬಿ ಕೊಂಡಿದ್ದಾರೆ.
ಮಠದ ಆವರಣದಲ್ಲಿ ಶ್ರೀಗಳಿಗೆ ಸಕಲ ಸರ್ಕಾರಿ ಗೌರವ ಸಲ್ಲಿಸಿದ ನಂತರ ಬೃಂದಾವನ ನಿರ್ಮಾಣ ಮಾಡುವ ಸ್ಥಳದಲ್ಲಿ ನಡೆಯುವ ಅಂತಿಮ ಕಾರ್ಯ ನಡೆಯುವ ಸ್ಥಳಕ್ಕೆ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದರಿಂದಾಗಿ ರಸ್ತೆಯಲ್ಲೇ ಕುಳಿತು ಶ್ರೀಗಳ ಅಂತಿಮ ವಿಧಿವಿಧಾನ ಕಾರ್ಯಗಳನ್ನು ಭಕ್ತರು ಕಣ್ತುಂಬಿ ಕೊಂಡಿದ್ದಾರೆ.
ಇನ್ನು ಭಕ್ತರ ಕೋರಿಕೆ ಮೇರೆಗೆ ವಿದ್ಯಾಪೀಠ ಮಠದ ಆಡಳಿತ ಮಂಡಳಿ ಅಂತಿಮ ವಿಧಿವಿಧಾನ ಕಾರ್ಯವನ್ನು ಭಕ್ತರು ನೋಡುವ ಸಲುವಾಗಿ ಮಠದ ಆವರಣದಲ್ಲಿ ಹಾಗೂ ವಿದ್ಯಾಪೀಠ ಸರ್ಕಲ್ನಲ್ಲಿ ಎಲ್ಇಡಿ ಸ್ಕ್ರೀನ್ ವ್ಯವಸ್ಥೆ ಮಾಡಿತ್ತು. ರಸ್ತೆಯ ಮೇಲೆ ಕುಳಿತು ಶ್ರೀಗಳ ಭಕ್ತರು ಪೇಜಾವರ ಶ್ರೀಗಳ ಅಂತಿಮ ವಿಧಿ ವಿಧಾನ ಕಾರ್ಯಗಳನ್ನು ಕಣ್ತುಂಬಿಕೊಂಡ್ರು. ತುಂಬಾ ಭಾರದ ಮನಸ್ಸಿನಿಂದಲೇ ಶ್ರೀಗಳನ್ನು ಬೀಳ್ಕೊಟ್ಟರು.
ಇನ್ನು ಶ್ರೀಗಳ ಇಚ್ಛೆಯಂತೆ ಮಠದ ಶ್ರೀಕೃಷ್ಣ ದೇವಾಲಯದ ಪಕ್ಕದಲ್ಲಿ ಬೃಂದಾವನ ನಿರ್ಮಾಣ ಮಾಡಿದ್ದು, ಸುಮಾರು 150ಕ್ಕೂ ಹೆಚ್ಚು ವಿದ್ವಾಂಸರು ಹಾಗೂ ಪುರೋಹಿತರು ಮಂತ್ರಗಳನ್ನು ಪಠಿಸುತ್ತಾ ಪೇಜಾವರ ಶ್ರೀಗಳನ್ನು ಕೃಷ್ಣನ ಪಾದದಡಿಗೆ ಕಳುಹಿಸಿಕೊಟ್ಟರು. ಮಾಧ್ವ ಸಂಪ್ರದಾಯದಂತೆ ಬೃಂದಾವನ ನಿರ್ಮಾಣ ಮಾಡುವ ಗುಂಡಿಯೊಳಗೆ ಮೊದಲು ಶ್ರೀಗಳ ಪಾರ್ಥಿವ ಶರೀರವನ್ನಿಟ್ಟು ನಂತರ ಹತ್ತಿ ಕಾಳು ಮೆಣಸು, ಉಪ್ಪು, ಪಚ್ಚೆ ಕರ್ಪೂರ ದಿಂದ ಶ್ರೀಗಳನ್ನು ಮುಚ್ಚಿ ಅಂತಿಮ ಪೂಜಾ ಕಾರ್ಯವನ್ನು ನೆರವೇರಿಸಲಾಯ್ತು.