ಬೆಂಗಳೂರು: 2021-22ನೇ ಶೈಕ್ಷಣಿಕ ಸಾಲಿನಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-(ಆರ್ ಟಿ ಇ) 2009ರ ಸೆಕ್ಷನ್ 12(1)(ಬಿ) ಹಾಗೂ 12(1)(ಸಿ) ಅಡಿಯಲ್ಲಿ ಖಾಸಗಿ ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳಲ್ಲಿ ಉಚಿತ ಪ್ರವೇಶಕ್ಕಾಗಿ ಅರ್ಹ 6776 ಅರ್ಜಿಗಳನ್ನು 2ನೇ ಸುತ್ತಿಗೆ ಪರಿಗಣಿಸಲಾಗಿದೆ. ಜುಲೈ 22 ರಂದು ಆನ್‌ಲೈನ್ ಮೂಲಕ ಲಾಟರಿ ಪ್ರಕಿಯೆಯು ನಡೆಸಲಾಗಿದೆ. 6012 ಸೀಟು ಹಂಚಿಕೆ ಆಗದೆ ಹಾಗೇ ಉಳಿದಿದೆ.
ಈ ಸುತ್ತಿನ 2ನೇ ಲಾಟರಿ ಪ್ರಕ್ರಿಯೆಯಲ್ಲಿ 764 ಅರ್ಹ ಮಕ್ಕಳನ್ನು ಶಾಲೆಗಳಿಗೆ ಹಂಚಿಕೆ ಮಾಡಲಾಗಿದೆ. ಆಯ್ಕೆಯಾದ ಮಕ್ಕಳ ಪೋಷಕರ ನೋಂದಾಯಿತ ಮೊಬೈಲ್ ಸಂಖ್ಯೆಗೆ ಎಸ್ಎಂಎಸ್ ಮೂಲಕ ಸೀಟು ಹಂಚಿಕೆ ಮಾಹಿತಿಯನ್ನು ನೀಡಲಾಗಿದೆ. ಎಲ್ಲಾ ಪೋಷಕರು ಜುಲೈ 24 ರಿಂದ ಆಗಸ್ಟ್ 3 ರೊಳಗೆ ಸಂಬಂಧಪಟ್ಟ ಶಾಲೆಗಳಿಗೆ ಸೀಟು ಹಂಚಿಕೆ ಪತ್ರದೊಂದಿಗೆ ಭೇಟಿ ನೀಡಿ ದಾಖಲಾತಿ ಮಾಡಲು ತಿಳಿಸಿದೆ. ಹಂಚಿಕೆ ವಿವರ ಇಲಾಖಾ ವೆಬ್‌ಸೈಟ್ (www.schooleducation.kar.nic.in) ನಲ್ಲಿ ಲಭ್ಯವಿದೆ.
ಕಳೆದ ವರ್ಷವೂ ಉಳಿಕೆಯಾಗಿದ್ದವು 4,235 ಸೀಟುಗಳು
ಕಳೆದ ಸಾಲಿನ 2020-21ರಲ್ಲಿ ಆರ್‌ಟಿಇ 11,466 ಅರ್ಜಿ ಬಂದಿತ್ತು. ಇದರಲ್ಲಿ 11,206 ಮೊದಲ ಸುತ್ತಿನ ಲಾಟರಿ ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆ ಮಾಡಿದರು. ಆದರೆ, ಮೊದಲ ಲಾಟರಿ ಪ್ರಕ್ರಿಯೆಯಲ್ಲಿ 5118 ವಿದ್ಯಾರ್ಥಿಗಳು ದಾಖಲಾತಿ ಆಗಲಿಲ್ಲ. ಕಾರಣ ಅವರಿಗೆ ಬೇಕಾದ ಶಾಲೆ ಸಿಗಲಿಲ್ಲ. ಮತ್ತೆ 2ನೇ ಲಾಟರಿ ಪ್ರಕಿಯೆಯಲ್ಲಿ ಸುಮಾರು 833 ಮಕ್ಕಳಿಗೆ ಬೇಕಾದ ಶಾಲೆ ಸಿಕ್ಕಿದ ಬಳಿಕ ಶಾಲೆಗಳಿಗೆ ದಾಖಲಾದರು. ಸುಮಾರು 6741ಆರ್‌ಟಿಇ ಸೀಟುಗಳಲ್ಲಿ 4,235 ಸೀಟು ಉಳಿಕೆಯಾಗಿದ್ದವು.
ಉಳಿಕೆಗೆ ಕಾರಣ
ಆರ್‌ಟಿಇ ಸೀಟು ನೀಡುವ ಬಹುತೇಕ ಖಾಸಗಿ ಶಾಲೆಗಳಲ್ಲಿ ಮೂಲ ಸೌಕರ್ಯ ಕೊರತೆ ಇದೆ. ವಿದ್ಯಾರ್ಥಿಗಳ ಕಲಿಕೆಗೆ ಪೂರಕ ವಾತಾವರಣವಿಲ್ಲದೇ ಇರುವುದು, ಕಲಿಕೆಯ ವಿಷಯದಿಂದ ಹಿಡಿದು ಶೌಚಾಲಯ, ಆಟದ ಮೈದಾನ ಸೇರಿದಂತೆ ಯಾವುದೇ ಸೌಲಭ್ಯಗಳು ಇರುವುದಿಲ್ಲ. ಖಾಸಗಿ ಶಾಲೆಗಳಲ್ಲಿ ಸೀಟುಗಳನ್ನು ನೀಡುವುದನ್ನು ನಿಲ್ಲಿಸಿದ ಬಳಿಕ ಬೆರಳೆಣಿಕೆಯಷ್ಟು ಶಾಲೆಗಳಿಗೆ ಸೀಟು ನೀಡಲಾಗುತ್ತಿದೆ.
ಈ ಶಾಲೆಗಳಿಗೆ ಹೋಲಿಸಿಕೊಂಡರೆ ಸರ್ಕಾರಿ ಶಾಲೆಗಳೇ ಉತ್ತಮವಾಗಿವೆ ಎಂಬ ಕಾರಣಕ್ಕೆ ಪೋಷಕರು ಆರ್ಟಿಇಗೆ ಅರ್ಜಿ ಸಲ್ಲಿಸುವುದನ್ನ ನಿಲ್ಲಿಸಿದ್ದಾರೆ. ಜೊತೆಗೆ ಆರ್‌ಟಿಇ ಅಡಿಯಿಂದ ದಾಖಲಾದ ಬಳಿಕವೂ ಸಾಕಷ್ಟು ಶಾಲೆಗಳಲ್ಲಿ ಇತರೆ ಚಟುವಟಿಕೆಗಾಗಿ ಶುಲ್ಕದ ಒತ್ತಾಯ ಕೇಳಿಬಂದ ಕಾರಣ ಆರ್‌ಟಿಇ ಸೀಟ್ನಿಂದ ಪೋಷಕರು ದೂರ ಹೋಗುತ್ತಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಬೇಜವಾಬ್ದಾರಿ ಮನುಷ್ಯ : ಸಂಸದ ಶ್ರೀನಿವಾಸ್ ಪ್ರಸಾದ್ ವಾಗ್ದಾಳಿ