ಬೆಂಗಳೂರು : ಪ್ರಕರಣವೊಂದರಲ್ಲಿ ಉದ್ಯಮಿ ಶೀತಲ್ ಕುಮಾರ್ ಮನೆರೆ, ಶೀತಲ್ ಜಿನೇಂದ್ರ ಮಗ್ದುಮ್ ಹಾಗೂ ಅವರ ಕುಟುಂಬ ಸದಸ್ಯರಿಗೆ ಸೇರಿದ 40.22 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಲ್ಲಿರುವ ಜಮೀನು, ವಾಣಿಜ್ಯ ಸಂಕೀರ್ಣ, ಗಾಳಿ ಗಿರಣಿ, ವಸತಿ ಸಮುಚ್ಚಯ ಮತ್ತು ಮನೆ ಸೇರಿದಂತೆ ಒಟ್ಟು 12 ಸ್ಥಿರಾಸ್ತಿಗಳನ್ನ ಜಪ್ತಿ ಮಾಡಲಾಗಿದೆ ಎಂದು ಇಡಿ ಮಾಧ್ಯಮ ಪ್ರಕಟಣೆ ತಿಳಿಸಿದೆ.
ಉದ್ಯಮಿ ಸಂಜಯ್ ಧನ್‌ಚಂದ್ ಘೋಡಾವತ್ ನೀಡಿದ ದೂರಿನನ್ವಯ 2021ರಲ್ಲಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಫ್‌ಐಆರ್ ಆಧರಿಸಿ ಇಡಿ ತನಿಖೆ ಆರಂಭಿಸಿತ್ತು. ಆರೋಪಿಗಳು ಸಂಜಯ್ ಧನ್‌ಚಂದ್ ಘೋಡಾವತ್ರಿಂದ ರಿಯಲ್ ಎಸ್ಟೇಟ್ ಯೋಜನೆಗಳಿಗಾಗಿ 525 ಕೋಟಿ ರೂ ಹೂಡಿಕೆ ಮಾಡಿಸಿದ್ದರು. ನಂತರ ಹಣವನ್ನು ತಮ್ಮ ವೈಯಕ್ತಿಕ ಖಾತೆಗಳು, ಕುಟುಂಬ ಸದಸ್ಯರ ಖಾತೆಗಳಿಗೆ ವರ್ಗಾಯಿಸಿದ್ದರು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ಮುಂದುವರೆದಿದೆ.
ಓದಿ: ಇಡಿ ನಿರ್ದೇಶಕ ಮಿಶ್ರಾ ಸೇವಾವಧಿ ವಿಸ್ತರಣೆಗೆ ಸುಪ್ರೀಂ ಕೋರ್ಟ್ ಸಮ್ಮತಿ
ವಿನಯ್ ಪಾಠಕ್ ಬಂಧನ: ಭ್ರಷ್ಟಾಚಾರ ಪ್ರಕರಣ ಸಂಬಂಧ ಕಾನ್ಪುರ ವಿಶ್ವ ವಿದ್ಯಾಲಯದ ಉಪಕುಲಪತಿ ವಿನಯ್ ಪಾಠಕ್ ವಿರುದ್ಧ ಎಫ್‌ಐಆರ್ ದಾಖಲಿಸಿದ್ದ ಡೇವಿಡ್ ಮರಿಯೋ ಡೆನ್ನಿಸ್ ಅವರನ್ನು ಶುಕ್ರವಾರ ಇಡಿ ಅಧಿಕಾರಿಗಳು ಬಂಧಿಸಿದ್ದಾರೆ. ಆಗ್ರಾ ವಿಶ್ವವಿದ್ಯಾಲಯದ ಎಂಬಿಬಿಎಸ್ ಮತ್ತು ಬಿಎಎಂಎಸ್ ಪರೀಕ್ಷೆಯಲ್ಲಿ ಅಕ್ರಮ ನಡೆಸಿರುವ ಬಗ್ಗೆ ಬಂಧಿಸಿರುವುದಾಗಿ ತಿಳಿದುಬಂದಿದೆ. ಡೇವಿಡ್ ವಿರುದ್ಧ ಇಡಿ ಅಧಿಕಾರಿಗಳು ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣ ಸಂಬಂಧ ಕಳೆದ ಜೂನ್ 28ರಂದು ಆಗ್ರಾ, ಲಖನೌ, ಕಾನ್ಪುರ್, ಕಾಸ್ಗಂಜ್, ಫಿರೋಜಾಬಾದ್, ದೆಹಲಿಯ ವಿವಿದೆಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದರು.
ಉಪ ಕುಲಪತಿ ವಿನಯ್ ಪಾಠಕ್ ದೂರಿನ ಮೇಲೆ ಬಂಧನ : ಪ್ರಕರಣ ಸಂಬಂಧ 2022ರ ಆಗಸ್ಟ್ 27ರಂದು ಆಗ್ರಾ ವಿಶ್ವ ವಿದ್ಯಾಯಲದ ಅಂದಿನ ಉಪಕುಲಪತಿಯಾಗಿದ್ದ ವಿನಯ್ ಕುಮಾರ್ ಪಾಠಕ್ ಅವರ ಸೂಚನೆ ಮೇರೆಗೆ ಗಣಿತ ವಿಭಾಗದ ಮುಖ್ಯಸ್ಥ ಸಂಜೀವ್ ಕುಮಾರ್ ಹರಿ ಪರ್ವತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಸೇಂಟ್ ಜಾನ್ ಕಾಲೇಜಿನ ಪರೀಕ್ಷಾ ಕೇಂದ್ರದಿಂದ ಉತ್ತರ ಪತ್ರಿಕೆಗಳನ್ನು ಸಾಗಿಸುತ್ತಿದ್ದ ಟೆಂಪೋ ಚಾಲಕ ದೇವೆಂದ್ರ ಎಂಬಾತನನ್ನು ಬಂಧಿಸಲಾಗಿತ್ತು. ಇವರ ಜೊತೆಗೆ ಭಿಕಂ ಸಿಂಗ್, ಶೈಲೇಂದ್ರ ಭಗೇಲ್ ಅಲಿಯಾಸ್ ಶೈಲು, ಉಮೇಶ್, ವಿದ್ಯಾರ್ಥಿ ನಾಯಕ ರಾಹುಲ್ ಪರಾಶರ್, ಶಿವಕುಮಾರ್ ದಿವಾಕರ್, ಕಾಸ್ಗಂಜ್ ನಿವಾಸಿ ಪುನೀತ್, ಕಾನ್ಪುರ್ ನಿವಾಸಿ ಅತುಲ್, ಜಾನ್ಪುರ್ ನಿವಾಸಿ ದುರ್ಗೇಶ್ ಕುಮಾರ್ನನ್ನು ಪೊಲೀಸರು ಬಂಧಿಸಿದ್ದರು.