ಬೆಂಗಳೂರು: ನಕಲಿ ಚೆಕ್ ಬಳಸಿ ಬ್ಯಾಂಕ್ ಮ್ಯಾನೇಜರ್ವೊಬ್ಬ ಗ್ರಾಹಕರ ಹಣ ಲೂಟಿ ಮಾಡಲು ಯತ್ನಿಸಿರುವ ಘಟನೆ ನಗರದಲ್ಲಿ ನಡೆದಿದೆ.
ನಕಲಿ ಚೆಕ್ ಬಳಸಿ ಎನ್ಜಿಒ ಸಂಸ್ಥೆಯೊಂದರ ಖಾತೆಗೆ ಹಣ ವರ್ಗಾವಣೆ ಮಾಡಿದ ಆರೋಪದ ಮೇಲೆ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ ಹಾಗೂ ಆತನ ಸಹಚರರನ್ನು ರಾಮಮೂರ್ತಿನಗರ ಪೊಲೀಸರು ಬಂಧಿಸಿದ್ದಾರೆ.
ಜು.05ರಂದು ಹರೀಶ್ ಎಂಬಾತ ರಾಮಮೂರ್ತಿ ನಗರದಲ್ಲಿರುವ ಐಸಿಐಸಿಐ ಬ್ಯಾಂಕ್ನಲ್ಲಿ ಎನ್ಜಿಒ ಸಂಸ್ಥೆ ಹೆಸರಿನಲ್ಲಿ 3.95 ಕೋಟಿ ರೂ. ಚೆಕ್ ನೀಡಿ ವರ್ಗಾವಣೆ ಮಾಡುವಂತೆ ಸೂಚಿಸಿದ್ದ. ಅದರಂತೆ ಹಣ ಮತ್ತೊಂದು ಅಕೌಂಟ್ಗೆ ವರ್ಗಾವಣೆಯಾಗಿತ್ತು.
ಚೆಕ್ನಿಂದ ವರ್ಗಾವಣೆಯಾದ ಹಣವನ್ನು ನೆಲಮಂಗಲದ ಐಸಿಐಸಿಐ ಬ್ಯಾಂಕ್ಗೆ ಹೋಗಿ ಬೇರೆ ಅಕೌಂಟ್ಗಳಿಗೆ ಡೆಪಾಸಿಟ್ ಮಾಡಲು ಹೋದಾಗ ದಾಖಲೆಗಳು ಇಲ್ಲದೆ ಚಡಪಡಿಸಿದ್ದರಿಂದ ಅನುಮಾನಗೊಂಡ ಬ್ಯಾಂಕ್ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನಲೆಯಲ್ಲಿ ಪರಿಕ್ಷಿತ್ ನಾಯ್ಡು, ಗುರು, ರಂಗಸ್ವಾಮಿ, ಅಜಯ್ ಹಾಗೂ ಹರೀಶ್ ಎಂಬುವವರನ್ನು ಪೊಲೀಸರು ಸ್ಥಳದಲ್ಲೇ ಬಂಧಿಸಿದ್ದು, ನಕಲಿ ಚೆಕ್ ಪಾಸ್ ಮಾಡಲು ಸಹಕರಿಸಿದ ಆರೋಪದಡಿಯಲ್ಲಿ ಐಸಿಐಸಿಐ ಬ್ಯಾಂಕ್ ಮ್ಯಾನೇಜರ್ನ್ನು ಬಂಧಿಸಿದ್ದಾರೆ.
ಪ್ರಕರಣದಲ್ಲಿ ಇನ್ನೂ ಕೆಲ ಆರೋಪಿಗಳು ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.