ಬೆಂಗಳೂರು : ನ್ಯಾಯಾಲಯದ ಅವರಣದಲ್ಲೇ ಕಳ್ಳರು ಕೈಚಳಕ ತೋರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನೃಪತುಂಗ ರಸ್ತೆಯಲ್ಲಿರುವ ಎಸಿಎಂಎಂ ಕೋರ್ಟ್ ಕಾಂಪ್ಲೆಕ್ಸ್ ಅವರಣದಲ್ಲಿರುವ ಅಂಚೆ ಕಚೇರಿಯಲ್ಲಿ ಅಕ್ಟೋಬರ್ 21ರಂದು ಕಳ್ಳತನ ನಡೆದಿದ್ದು, ಹಲಸೂರು ಗೇಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಕ್ಟೋಬರ್ 21ರಂದು ಸಂಜೆ 6:30ರ ಸುಮಾರಿಗೆ ಅಂಚೆ ಕಚೇರಿಯ ಬೀಗ ಹಾಕಿಕೊಂಡು ತೆರಳಲಾಗಿತ್ತು. ಮರು ದಿನ ಭಾನುವಾರವಾದ್ದರಿಂದ ಅಕ್ಟೋಬರ್ 23ರಂದು ಅಂಚೆ ಕಚೇರಿ ಬಾಗಿಲು ತೆರೆದಾಗ ಕಚೇರಿಯ ಹಿಂಭಾಗದ ಕಿಟಕಿಯ ಗ್ರಿಲ್ ಕತ್ತರಿಸಿ ಅಲ್ಮೆರಾದಲ್ಲಿರುವ ಲಾಕರ್ ಕದ್ದೊಯ್ದಿರುವುದು ಬೆಳಕಿಗೆ ಬಂದಿದೆ. ಲಾಕರ್ನಲ್ಲಿದ್ದ ಹತ್ತು ಸಾವಿರ ರೂ ನಗದು ಹಾಗೂ ಕೆಲ ದಾಖಲಾತಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಕಳ್ಳರನ್ನು ಪತ್ತೆ ಹಚ್ಚುವಂತೆ ಕಚೇರಿಯ ಪೋಸ್ಟ್ ಮಾಸ್ಟರ್ ಲಕ್ಷ್ಮಿ.ಜೆ ಎಂಬುವವರು ಹಲಸೂರು ಗೇಟ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಕೆಲಸದಾತನ ನಂಬಿ ಮೋಸಹೋದ ಮಾಲೀಕ: ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ನಗ, ನಗದು ಮಾಯ
ಹುಬ್ಬಳ್ಳಿಯಲ್ಲಿ ವಿದೇಶಿ ಮೂಲದ ನಾಲ್ವರು ಕಳ್ಳರ ಬಂಧನ : ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಕಳ್ಳತನ ಮಾಡುತ್ತಿದ್ದ ವಿದೇಶಿ ಮೂಲದ ನಾಲ್ವರು ಕಳ್ಳರನ್ನು ಇತ್ತೀಚೆಗೆ ಹುಬ್ಬಳ್ಳಿ ಪೊಲೀಸರು ಬಂಧಿಸಿದ್ದರು. ಬಂಧಿತರು ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ಹಣ ದೋಚಿದ್ದರು. ಈ ನಾಲ್ವರು ಬೆಳಗಾವಿಯಿಂದ ಹುಬ್ಬಳ್ಳಿಗೆ ಕಾರಿನಲ್ಲಿ ತೆರಳುವಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಆರೋಪಿಗಳು ಹಲವು ದಿನಗಳಿಂದ ಬೆಳಗಾವಿಯಲ್ಲಿ ಕಳ್ಳತನ ಮಾಡುತ್ತಿದ್ದರು. ಬೆಳಗಾವಿ ಪೊಲೀಸರ ಮಾಹಿತಿ ಮೇರೆಗೆ ಹುಬ್ಬಳ್ಳಿಯಲ್ಲಿ ವಿದೇಶಿ ಮೂಲದ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರನ್ನು ವಶಕ್ಕೆ ಪಡೆಯಲಾಗಿತ್ತು. ಬಳಿಕ ಇವರನ್ನು ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಗೆ ಕರೆತಂದು ವಿಚಾರಣೆ ನಡೆಸಲಾಗಿತ್ತು.
ರಾಮನಗರದಲ್ಲಿ ಮೆಡಿಕಲ್ ಶಾಪ್ ಕಳ್ಳತನ : ರಾಮನಗರದಲ್ಲಿ ಕಳ್ಳರ ಗುಂಪೊಂದು ನ್ಯಾಯಾಲಯದ ಮುಂಭಾಗದಲ್ಲಿದ್ದ ಮೆಡಿಕಲ್ ಶಾಪ್ನಲ್ಲಿ ಕಳ್ಳತನ ಮಾಡಿರುವ ಘಟನೆ ಇತ್ತೀಚೆಗೆ ನಡೆದಿತ್ತು ನಡೆದಿದೆ. ಕಳ್ಳರ ಕೈಚಳಕ ಇಲ್ಲಿನ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅಕ್ಟೋಬರ್ 19ರ ಮುಂಜಾನೆ ದ್ವಿಚಕ್ರ ವಾಹನದಲ್ಲಿ ಆಗಮಿಸಿದ್ದ 4 ಜನ ಖದೀಮರು ಚನ್ನಪಟ್ಟಣ ನಗರದ ನ್ಯಾಯಾಲಯದ ಮುಂಭಾಗದ ಭಾಸ್ಕರ್ ಮೆಡಿಕಲ್ಸ್ ಶಾಪ್ ಬೀಗ ಒಡೆದು ಅಂಗಡಿಗೆ ನುಗ್ಗಿದ್ದರು. ಬಳಿಕ ಅಂಗಡಿಯಲ್ಲಿದ್ದ ಹಣ ಹಾಗೂ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು. ಸಿಸಿಟಿವಿ ದೃಶ್ಯದಲ್ಲಿ ಇಬ್ಬರು ಕಳ್ಳರು ಅಂಗಡಿ ಒಳಗೆ ನುಗ್ಗಿ ದೋಚಿದ್ದು, ಮತ್ತಿಬ್ಬರು ಹೊರಗಡೆ ನಿಂತಿರುವುದನ್ನು ಕಾಣಬಹುದಾಗಿದೆ.ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.