ಬೆಂಗಳೂರು: ಮಹಿಳೆಯರಿಗೆ ಸುರಕ್ಷಿತ ನಗರವನ್ನಾಗಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಸೇಫ್ ಸಿಟಿ ಪ್ರಾಜೆಕ್ಟ್‌ನ್ನು ರಾಜ್ಯದಲ್ಲಿ ಅಳವಡಿಸಲು ಅನಗತ್ಯ ವಿಳಂಬ ಧೋರಣೆಯನ್ನು ಬಿಜೆಪಿ ಸರಕಾರ ತೋರಿಸುತ್ತಿದೆ. ಈ ಮೂಲಕ ನಗರದ ಕ್ರೈಂ ರೇಟ್ ಹೆಚ್ಚಳವಾಗಲು ಕಾರಣವಾಗಿದೆ ಎಂದು ಆಮ್ ಆದ್ಮಿ ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆರೋಪಿಸಿದರು.
ನಗರದ ಪ್ರೆಸ್ಕ್ಲಬ್ನಲ್ಲಿ ಇಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ದೆಹಲಿಯಲ್ಲಿ ನಡೆದಂತಹ ಘನಘೋರ ಅತ್ಯಾಚಾರ ಪ್ರಕರಣದ ನಂತರ ದೆಹಲಿ ನಗರ ಪೊಲೀಸ್ ಸೇಫ್ ಸಿಟಿ ಯೋಜನೆಯನ್ನು ರೂಪಿಸಿತ್ತು. 2018ರಲ್ಲಿ ಈ ಯೋಜನೆಗೆ ಕೇಂದ್ರ ಸರ್ಕಾರದ ಗೃಹ ಇಲಾಖೆ ಅನುಮತಿ ನೀಡಿತ್ತು. ಈ ಯೋಜನೆಯ ಅಡಿಯಲ್ಲಿ ಬೆಂಗಳೂರು, ದೆಹಲಿ, ಮುಂಬಯಿ, ಚೆನ್ನೈ, ಹೈದರಾಬಾದ್, ಲಖನೌ, ಅಹಮದಾಬಾದ್ ಮತ್ತು ಕೋಲ್ಕೊತ್ತಾ ನಗರಗಳಿಗೆ ಹಣಕಾಸಿನ ನೆರವು ಒದಗಿಸಲಾಗಿತ್ತು. ಬೆಂಗಳೂರು ನಗರಕ್ಕೆ ಮೊದಲ ಹಂತವಾಗಿ 667 ಕೋಟಿ ರೂ.ಗಳ ಅನುದಾನ ಬಿಡುಗಡೆಯಾಗಿತ್ತು.
ಈ ಹಣವನ್ನು ಬಳಸಿಕೊಂಡು ನಗರದಲ್ಲಿ ಮೂರು ವರ್ಷಗಳ ಅವಧಿಯಲ್ಲಿ, 16 ಸಾವಿರ ಕ್ಯಾಮೆರಾಗಳನ್ನು ಅಳವಡಿಸುವುದು ಪ್ರಮುಖ ಗುರಿಯಾಗಿತ್ತು. 50 ಸೇಫ್ಟೀ ಐಲ್ಯಾಂಡ್ ಗಳನ್ನು ರೂಪಿಸುವುದು ಈ ಯೋಜನೆಯಲ್ಲಿತ್ತು. ಈ ಯೋಜನೆ ಅನುಷ್ಠಾನ ಮಾಡವಲ್ಲಿ ರಾಜ್ಯ ಸರಕಾರ ವಿನಾಕಾರಣ ವಿಳಂಬ ಮಾಡಿದೆ.
ಕೇಂದ್ರ ಸರಕಾರ ಯೋಜನೆಗೆ ಅನುಮತಿ ನೀಡಿದ ನಂತರ ರಾಜ್ಯ ಸರ್ಕಾರ ಮತ್ತೊಂದು ವರ್ಷ ಸಮಯ ತಗೆದುಕೊಂಡಿತು. ಆ ನಂತರ, ಈವರೆಗೂ ನಾಲ್ಕು ಟೆಂಡರ್ಗಳನ್ನು ಕರೆದಿರುವ ರಾಜ್ಯ ಸರ್ಕಾರ ಕೊನೆಗೂ ಯೋಜನೆ ಅನುಷ್ಠಾನಕ್ಕೆ ಕಂಪನಿಯೊಂದನ್ನು ಅಂತಿಮಗೊಳಿಸುವ ಹಂತಕ್ಕೆ ತಲುಪಿದೆ ಎಂದು ತಿಳಿಸಿದರು.
ವಿಶ್ವದಲ್ಲೇ ಅತಿ ಹೆಚ್ಚು ಸರ್ವೇಲೆನ್ಸ್ ಕ್ಯಾಮೆರಾ ಹೊಂದಿರುವ ನಗರ ದೆಹಲಿ: ಕೇಂದ್ರ ಸರ್ಕಾರದ ಅನುದಾನ ಪಡೆದುಕೊಳ್ಳುವ ಮೂಲಕ ದೆಹಲಿಯಲ್ಲಿ ಪ್ರತಿ ಒಂದು ಚದರ ಮೈಲಿಗೆ 1826.6 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಈ ಮೂಲಕ ವಿಶ್ವದಲ್ಲೇ ಅತಿ ಹೆಚ್ಚು ಸರ್ವೇಲೆನ್ಸ್ ಕ್ಯಾಮೆರಾಗಳನ್ನು ಹೊಂದಿರುವ ನಗರ ಎನ್ನುವ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಲಂಡನ್ ನಗರ 2ನೇ ಸ್ಥಾನದಲ್ಲಿದ್ದು, 3 ಸ್ಥಾನವನ್ನು ಚೈನ್ನೈ ಪಡೆದುಕೊಂಡಿದೆ ಎಂದು ಮಾಹಿತಿ ನೀಡಿದರು.
ಯೋಜನೆ ಪ್ರಾರಂಭಕ್ಕೆ ಗ್ರಹಣ ಹಿಡಿಸಿರುವ ಸರಕಾರ: ಮಹತ್ವಪೂರ್ಣ ಯೋಜನೆಯ ಅನುಷ್ಠಾನಕ್ಕೆ ಜೆಸಿಬಿ ಸರ್ಕಾರಗಳು ಗ್ರಹಣ ಹಿಡಿಸಿವೆ. ಮಹಿಳೆಯರ ವಿರುದ್ದ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಆದರೆ, ಇದನ್ನು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಯಾವುದೇ ಮನಸ್ಥಿತಿ ತೋರಿಸದೇ ಇರುವುದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.
ಕ್ರೈಂ ರೇಟ್ ಹೆಚ್ಚಲು ಬಿಜೆಪಿ ಸರಕಾರ ಕಾರಣ: ರಾಜ್ಯ ಬಿಜೆಪಿ ಸರ್ಕಾರ ನಿರ್ಭಯಾ ನಿಧಿ ಬಳಸಿಕೊಳ್ಳದ ಹಿನ್ನೆಲೆ ನಗರದಲ್ಲಿ ಅಪರಾಧ ಚಟುವಟಿಕೆಗಳು ಹೆಚ್ಚಾಗಿವೆ. ಆದಕಾರಣ ರಾಜ್ಯ ಸರ್ಕಾರ ಈ ಯೋಜನೆ ಜಾರಿಯತ್ತ ಹೆಚ್ಚಿನ ಗಮನ ಹರಿಸಬೇಕು. ಈ ಮೂಲಕ ನಗರವನ್ನು ಮಹಿಳೆಯರಿಗಾಗಿ ಸುರಕ್ಷಿತವಾಗಿಸಬೇಕು ಎಂದು ಈ ಸಂದರ್ಭದಲ್ಲಿ ಬೆಂಗಳೂರು ನಗರ ಎಎಪಿ ಮಹಿಳಾ ಘಟಕದ ಅಧ್ಯಕ್ಷರಾದ ಕುಶಲಾ ಸ್ವಾಮಿ ಆಗ್ರಹಿಸಿದರು.