ಬೆಂಗಳೂರು : ಸಿಬ್ಬಂದಿ ಹಾಗೂ ಸಜಾ ಬಂಧಿಗಳಿಗೆ ಜೈಲಿನೊಳಗೆ ಮೊಬೈಲ್ ತರದಂತೆ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳು ತಾಕೀತು ಮಾಡಿದ್ದಾರೆ.
ಜೈಲಿನಲ್ಲಿ ಕುಳಿತೇ ಮೊಬೈಲ್ ಮೂಲಕ ತಮ್ಮ ವಿರೋಧಿ ಬಣಗಳ ವಿರುದ್ಧ ಕತ್ತಿ ಮಸೆದು ಪರೋಕ್ಷವಾಗಿ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುತ್ತಿದ್ದ ಹಾಗೂ ಆರೋಪಿಗಳ ಜೊತೆ ಸಿಬ್ಬಂದಿ ಶಾಮೀಲು ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಆದೇಶ ನೀಡಲಾಗಿದೆ.
ಜೈಲಿನೊಳಗೆ ಅಷ್ಟೇ ಅಲ್ಲ, ಜೈಲಿನ ಮುಂದೆಯೂ ಸಹ ಮೊಬೈಲ್, ಎಲೆಕ್ಟ್ರಾನಿಕ್ ಸೇರಿ ಯಾವುದೇ ವಸ್ತುಗಳನ್ನು ತರಕೂಡದು ಎಂದು ಸೂಚನಾ ಫಲಕ ಹಾಕಲಾಗಿದೆ. ಕಳೆದ ಒಂದು ತಿಂಗಳ ಹಿಂದಿನಿಂದ ಈ ನಿಯಮ ಜಾರಿಯಲ್ಲಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಈಗಾಗಲೇ ಐದು ಪ್ರಕರಣ ದಾಖಲಿಸಲಾಗಿದೆ ಎಂದು ಜೈಲು ಅಧೀಕ್ಷಕ ರಂಗನಾಥ್ ತಿಳಿಸಿದ್ದಾರೆ.
ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ವಾಸ ಅನುಭವಿಸುತ್ತಿರುವ ಸಜಾಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳು ಇತ್ತೀಚಿನ ದಿನಗಳಲ್ಲಿ ಜೈಲಿನಲ್ಲಿದ್ದೇ ಅಪರಾಧ ಕೃತ್ಯಗಳಲ್ಲಿ ಪರೋಕ್ಷವಾಗಿ ಭಾಗಿಯಾಗುತ್ತಿದ್ದಾರೆ.
ಜೈಲಿನಲ್ಲಿ ಕುಳಿತು ಮೊಬೈಲ್ ಮೂಲಕ ಹೊರಗಿನ ಅಪರಾಧ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಹಳೆ ವೈಷ್ಯಮ ಹಿನ್ನೆಲೆ ಜೀವ ಬೆದರಿಕೆ, ಕೊಲೆ, ಕೊಲೆಯತ್ನ, ಹಲ್ಲೆ ಹಾಗೂ ಧಮಕಿ ಸೇರಿ ವಿವಿಧ ಅಪರಾಧಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈಲು ಹಕ್ಕಿಗಳು ಭಾಗಿಯಾಗುತ್ತಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ಜೈಲಿನಲಿದ್ದ 20ಕ್ಕಿಂತ ಹೆಚ್ಚು ರೌಡಿಗಳು ಸೆರೆಮನೆಯಲ್ಲಿದ್ದುಕೊಂಡೇ ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾಗಿ ತಮ್ಮದೇ ಹವಾ ಸೃಷ್ಟಿಸಿಕೊಂಡಿದ್ದರು. ಇದರಿಂದ ನಗರದ ಕಾನೂನು ಸುವ್ಯವಸ್ಥೆಗೂ ಧಕ್ಕೆಯಾಗಿತ್ತು.
ಈ ಸಂಬಂಧ ಕಮಿಷನರ್ ಸಲಹೆ ಮೇರೆಗೆ ಕಾರಾಗೃಹ ಇಲಾಖೆಯ ಎಡಿಜಿಪಿ ಅಲೋಕ್ ಮೋಹನ್ ನಗರದ ನಟೋರಿಯಸ್ ರೌಡಿಗಳನ್ನು ರಾಜ್ಯದ ಬೇರೆ ಜೈಲುಗಳಿಗೆ ಗಡಿಪಾರು ಮಾಡಿದ್ದರು.
ಮತ್ತೊಂದೆಡೆ ಆರೋಪಿಗಳಿಗೆ ಜೈಲಿನೊಳಗೆ ಸಿಬ್ಬಂದಿಯಿಂದಲೇ ಮೊಬೈಲ್ ಸೇರಿ ಇನ್ನಿತರ ವಸ್ತುಗಳ ಸರಬರಾಜು ಆರೋಪ ಸಂಬಂಧ ಎಲ್ಲಾ ಸಿಬ್ಬಂದಿಗೂ ಜೈಲಿನೊಳಗೆ ಮೊಬೈಲ್ ತರದಂತೆ ಜೈಲು ಅಧೀಕ್ಷಕರು ತಾಕೀತು ಮಾಡಿದ್ದಾರೆ.
ಡ್ಯೂಟಿಗೆ ಹಾಜರಾಗುತ್ತಿದ್ದಂತೆ ಹೊರಗೇ ವಸ್ತುಗಳನ್ನ ಕಚೇರಿಯಲ್ಲಿಡಬೇಕು. ಕೇವಲ ಮೊಬೈಲ್ ಅಷ್ಟೇ ಅಲ್ಲ, ಹಣ, ಪರ್ಸ್, ಲ್ಯಾಪ್ಟಾಪ್, ಸಿಮ್ ಹಾಗೂ ಚಾರ್ಜರ್ಗಳು ಏನೂ ತರುವಂತಿಲ್ಲ. ನಿಷೇಧಿತ ವಸ್ತುಗಳನ್ನ ಜೈಲಿನ ಒಳಗೆ ತಂದರೆ ಕ್ರಿಮಿನಲ್ ಪ್ರಕರಣ ದಾಖಲಿಸುವುದಾಗಿ ಎಚ್ಚರಿಕೆ ನೀಡಲಾಗಿದೆ. ಖಾಸಗಿ ವಾಹನಗಳಿಗೂ ಪ್ರವೇಶವಿಲ್ಲ.
ಜೈಲಿಗೆ ಭೇಟಿ ನೀಡುವವರು ಸಹ ಮೊಬೈಲ್‌ಗಳನ್ನ ಕಚೇರಿಯಲ್ಲಿಡುವುದು ಕಡ್ಡಾಯವಾಗಿದೆ. ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಜೈಲು ಪ್ರವೇಶಿಸಬೇಕಾದರೆ ಮೂರು ಹಂತಗಳಲ್ಲಿ ಕಡ್ಡಾಯವಾಗಿ ತಪಾಸಣೆಗೆ ಒಳಪಡಬೇಕಿದೆ. ತಪಾಸಣೆ ಮಾಡಿಸದೆ ಒಳಗೆ ಹೋದ್ರೂ ಶಿಸ್ತುಕ್ರಮ ಕೈಗೊಳ್ಳುವುದಾಗಿ ಹೇಳಿ ಜೈಲಿನ ಒಳಗೆ ಮತ್ತು ಹೊರಗೆ ಸೂಚನಾ ಫಲಕಗಳನ್ನ ಜೈಲಾಧಿಕಾರಿಗಳು ಅಳವಡಿಸಿದ್ದಾರೆ.
ಪ್ರಸ್ತುತ ಜೈಲಿನಲ್ಲಿ 600 ಅಧಿಕಾರಿಗಳು ಹಾಗೂ ಸಿಬ್ಬಂದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಜಾಬಂಧಿ ಹಾಗೂ ವಿಚಾರಣಾಧೀನ ಕೈದಿಗಳು ಸೇರಿದಂತೆ 4800ಕ್ಕೂ ಹೆಚ್ಚು ಕೈದಿಗಳಿದ್ದಾರೆ. ಜೈಲಾಧಿಕಾರಿಗಳ ನಿರ್ಧಾರಕ್ಕೆ ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಆದರೆ, ಕಡ್ಡಾಯವಾಗಿ ನಿಯಮ ಪಾಲನೆ ಮಾಡಲೇಬೇಕೆಂದು ಖಡಕ್ ಎಚ್ಚರಿಕೆ ಹಿನ್ನೆಲೆ ಸಿಬ್ಬಂದಿ ಅನಿವಾರ್ಯವಾಗಿ ಆದೇಶ ಪಾಲಿಸಬೇಕಿದೆ.