ಬೆಂಗಳೂರು : ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಗೂಂಡಾಗಿರಿ ಖಂಡನೀಯ. ಕಾಂಗ್ರೆಸ್ ಗೂಂಡಾಗಿರಿ ಹೀಗೆ ಮುಂದುವರಿದರೆ ಅದಕ್ಕೆ ತಕ್ಕ ಉತ್ತರವನ್ನು ಬಿಜೆಪಿ ಕಾರ್ಯಕರ್ತರು ಕೊಡಲಿದ್ದಾರೆ ಎಂದು ಬಿಜೆಪಿ ರಾಜ್ಯ ಎಸ್‍ಸಿ ಮೋರ್ಚಾ ಅಧ್ಯಕ್ಷ ಹಾಗೂ ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಿನ್ನೆ ಚಿತ್ರದುರ್ಗದಲ್ಲಿ ಬಿಜೆಪಿ ಮುಖಂಡ ಹಾಗೂ ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರು ಪತ್ರಿಕಾಗೋಷ್ಠಿ ಮಾಡುವಾಗ ಕೆಲವು ಕಾಂಗ್ರೆಸ್ ಗೂಂಡಾಗಳು ಬಂದು ಅವರ ಮೇಲೆ ಇಲ್ಲಸಲ್ಲದ ಆಪಾದನೆ ಮಾಡಿದ್ದಾರೆ. ಜೊತೆಗೆ ಅವರ ಪತ್ರಿಕಾಗೋಷ್ಠಿಗೆ ತೊಂದರೆಯನ್ನುಂಟು ಮಾಡಿ ಅವರ ಮೇಲೆ ಎರಗಿದ್ದು ಖಂಡನೀಯ ಎಂದರು.
ಕಾರಜೋಳ ಅವರು ಪಕ್ಷದ ಪರವಾಗಿ ಅನೇಕ ಕಾರ್ಯಚಟುವಟಿಕೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದಲಿತರಿಗಾಗಿ ಮೀಸಲಿಟ್ಟ ಎಸ್‍ಸಿಎಸ್‍ಪಿಎಸ್‍ಟಿಪಿ 11 ಸಾವಿರ ಕೋಟಿ ಹಣವನ್ನು ಬೇರೆ ಉದ್ದೇಶಕ್ಕೆ ವಿನಿಯೋಗಿಸುವುದನ್ನು ನಮ್ಮ ಪಕ್ಷ ಮೊದಲಿನಿಂದಲೂ ಖಂಡಿಸುತ್ತಿದೆ ಹಾಗೂ ವಿರೋಧಿಸುತ್ತಿದೆ. ಇದೇ ವಿಚಾರವನ್ನು ಬಳಸಿ, ನಾನು, ಕಾರಜೋಳ, ರಾಜೀವ್, ಎನ್.ಮಹೇಶ್ ಹೀಗೆ ಅನೇಕ ಮುಖಂಡರು ಕಾಂಗ್ರೆಸ್ ವಿರುದ್ಧ ರಾಜ್ಯಾದ್ಯಂತ ಆಂದೋಲನ ಶುರು ಮಾಡಿದ್ದೇವೆ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ದಲಿತರಿಗೆ ದೋಖಾ ಮಾಡಿದೆ, ಅನ್ಯಾಯ ಮಾಡುತ್ತಿದೆ. ಮೋಸ, ವಂಚನೆ ಮಾಡುವ ಕುರಿತು ನಮ್ಮ ಸಮುದಾಯದ ಅಂದರೆ ಪರಿಶಿಷ್ಟ ಜಾತಿ, ವರ್ಗಗಳ ಜನರಿಗೆ ತಿಳಿಸುತ್ತಿದ್ದೇವೆ. ಇದೇ ಸಂದರ್ಭದಲ್ಲಿ ಕಾಂಗ್ರೆಸ್ಸಿಗರು ಕಾರಜೋಳರ ಮೇಲೆ ದಾಳಿಗೆ ಮುಂದಾಗಿದ್ದಾರೆ. ಈ ಗೂಂಡಾ ವರ್ತನೆ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ. 11 ಸಾವಿರ ಕೋಟಿ ಬಗ್ಗೆ ಸದನದಲ್ಲಿ ಪ್ರಶ್ನಿಸಿದರೆ ಅದಕ್ಕೂ ಹಾರಿಕೆ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.
ದಲಿತರಿಗೆ ಇಲ್ಲ ಸಲ್ಲದ ಆಶ್ವಾಸನೆ ಕೊಟ್ಟು ಈ ಸರಕಾರ ಅಧಿಕಾರಕ್ಕೆ ಬಂದಿದೆ. ಆದರೆ, ಒಂದು ಕೈಯಲ್ಲಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಂಡಂತೆ 11 ಸಾವಿರ ಕೋಟಿ ರೂಪಾಯಿ ದಲಿತರ ಹಣಕ್ಕೆ ಕನ್ನ ಹಾಕಿದ್ದೀರಿ. ಈ ನಿಮ್ಮ ನಡೆಯ ಕುರಿತು ಜನರಿಗೆ ತಿಳಿಸುವ ಆಂದೋಲನ ಮಾಡುತ್ತೇವೆ. ಕಾಂಗ್ರೆಸ್ ಗೂಂಡಾಗಿರಿ ಹೀಗೆ ಮುಂದುವರಿದರೆ ಅದಕ್ಕೆ ತಕ್ಕ ಉತ್ತರವನ್ನು ಬಿಜೆಪಿ ಕಾರ್ಯಕರ್ತರು ಕೊಡಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಮತ್ತೊಂದೆಡೆ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯ ವಕ್ತಾರ ಮತ್ತು ಮಾಜಿ ಶಾಸಕ ಪಿ.ರಾಜೀವ್, ರಾಜ್ಯದ ಮಾಜಿ ಉಪ ಮುಖ್ಯಮಂತ್ರಿ ಮತ್ತು ದಲಿತ ನಾಯಕ ಗೋವಿಂದ ಕಾರಜೋಳ ಅವರ ಮೇಲೆ ಚಿತ್ರದುರ್ಗದಲ್ಲಿ ಹಲ್ಲೆಗೆ ಪ್ರಯತ್ನ ಮಾಡಿದ್ದನ್ನು ತೀವ್ರವಾಗಿ ಖಂಡಿಸುವುದಾಗಿ ಹೇಳಿದರು.
ಹಲ್ಲೆಯ ಪ್ರಯತ್ನದ ಹಿಂದೆ ಕಾಂಗ್ರೆಸ್ ಕೈವಾಡವಿದೆ ಎಂದು ಆರೋಪ ಮಾಡಿದ ಅವರು, ದಲಿತರು ಜಾಗೃತ ಆಗಬಾರದು. ಈ ಸಂಬಂಧ ತಿಳುವಳಿಕೆ ಕೊಡುವ ಕೆಲಸವನ್ನು ಮಾಡಬಾರದೆಂಬ ಉದ್ದೇಶದಿಂದ ಭಯ ಹುಟ್ಟಿಸಲು ಈ ರೀತಿಯ ಹಲ್ಲೆ ನಡೆಸಲಾಗುತ್ತಿದೆ ಎಂದರು.
ಇದನ್ನೂ ಓದಿ : ಪ್ರಧಾನಿ ಮೋದಿ ಭೇಟಿಯಾದ ಸಿಎಂ ಸಿದ್ದರಾಮಯ್ಯ: 12,577.86 ಕೋಟಿ ತುರ್ತು ಬರ ಪರಿಹಾರಕ್ಕೆ ಮನವಿ