ಬೆಂಗಳೂರು: ಶಾಸಕರು, ಮಂತ್ರಿಗಳು, ಅಧಿಕಾರಿಗಳು ಜನ ಸೇವಕರು. ಈ ಸಾಮಾನ್ಯ ತಿಳುವಳಿಕೆ ಪ್ರತಿಯೊಬ್ಬರಲ್ಲೂ ಇರಬೇಕು. ನಾವ್ಯಾರು ರಾಜರುಗಳಲ್ಲ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ತಾಲ್ಲೂಕು ಮಟ್ಟದಲ್ಲಿ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು ವಾರಕ್ಕೊಮ್ಮೆ ನಡೆಸಿ, ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದರು.
ನಾಡಿನ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ ಎಂದರೆ ನೀವುಗಳು ಇದ್ದು ಏನು ಪ್ರಯೋಜನ. ಮುಖ್ಯಮಂತ್ರಿಯಾದ ಬಳಿಕ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆ ವೇಳೆ ಜನ ಸಾಮಾನ್ಯರು ನೂರಾರು ರೀತಿಯ ಮನವಿಗಳನ್ನು ನನಗೆ ನೀಡುತ್ತಿದ್ದಾರೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನ ಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕೆಲವೊಂದು ಸಮಸ್ಯೆಗಳಿಗೆ ವಾರದ ಕಾಲ ಮಿತಿಯಲ್ಲಿ ಪರಿಹಾರ ಒದಗಿಸಿ ಕೊಡಿ. ಕೆಲಸ ಆಗಿದೆಯಾ, ಇಲ್ಲವಾ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನ ತನಕ ಬರುವ ಅಗತ್ಯವೇ ಬೀಳುವುದಿಲ್ಲ. ಕೇವಲ ಬದಲಾವಣೆಗಾಗಿ ನಾಡಿನ ಜನತೆ ಸರ್ಕಾರವನ್ನು ಬದಲಾಯಿಸಿಲ್ಲ. ಬಹಳ ನಿರೀಕ್ಷೆಗಳನ್ನು ಇಟ್ಟುಕೊಂಡು ಹಿಂದಿನ ಸರ್ಕಾರವನ್ನು ಬದಲಾಯಿಸಿ ನಮ್ಮನ್ನು ಅಧಿಕಾರಕ್ಕೆ ತಂದಿದ್ದಾರೆ. ಅಭಿವೃದ್ಧಿಯ ಆಶೋತ್ತರಗಳನ್ನು ಇಟ್ಟುಕೊಂಡ ಜನರ ನಿರೀಕ್ಷೆಗಳಿಗೆ ತಕ್ಕಂತೆ ಅಧಿಕಾರಿಗಳು ಕೆಲಸ ಮಾಡಬೇಕು.
ನ್ಯಾಯ ವಿಳಂಬ ಸಹಿಸಲ್ಲ; ಕಠಿಣ ಕ್ರಮ ಕಾದಿದೆ: ತಹಶೀಲ್ದಾರ್, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಬರುವ ಅರ್ಜಿಗಳು 5 ವರ್ಷಕ್ಕೂ ಹೆಚ್ಚು ಅವಧಿಗೆ ಬಾಕಿ ಉಳಿದಿರುವುದನ್ನು ಗಮನಿಸಲಾಗಿದೆ. 5 ವರ್ಷವಾದರೂ ಪ್ರಕರಣ ಇತ್ಯರ್ಥಪಡಿಸದೆ ಇದ್ದರೆ, ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಅರ್ಥ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ವಿಳಂಬ ಜಾಸ್ತಿಯಾದಷ್ಟು ಭ್ರಷ್ಟಾಚಾರಕ್ಕೆ ಅವಕಾಶವಾಗುತ್ತದೆ. ವಿಳಂಬವೂ ಭ್ರಷ್ಟಾಚಾರವೇ. ವಿಳಂಬ ಮಾಡಿದರೆ ತಹಶೀಲ್ದಾರರು ಒಂದು ಅರ್ಜಿಯನ್ನು ಸ್ವೀಕರಿಸಿದರೆ, ಮೂರು ತಿಂಗಳಲ್ಲಿ ಇತ್ಯರ್ಥವಾಗಬೇಕು. ಉಪ ವಿಭಾಗಾಧಿಕಾರಿಗಳ ಬಳಿ ಬರುವ ಮನವಿಗಳ ಇತ್ಯರ್ಥಕ್ಕೆ ಬಹಳ ವಿಳಂಬ ಮಾಡ್ತಾರೆ. ಇದನ್ನು ಕನಿಷ್ಠ ಆರು ತಿಂಗಳಲ್ಲಿ ಹಾಗೂ ಜಿಲ್ಲಾಧಿಕಾರಿಗಳು ಒಂದು ವರ್ಷದಲ್ಲಿ ಇತ್ಯರ್ಥ ಮಾಡಬೇಕು. ಜಿಲ್ಲಾಧಿಕಾರಿಗಳು ಅನಗತ್ಯವಾಗಿ ಪ್ರಕರಣ ಮುಂದೂಡುವುದು, ಕಕ್ಷಿದಾರರನ್ನು ಕಾಯಿಸುವುದು, ವಾದ-ವಿವಾದಗಳನ್ನು ಆಲಿಸಿದ ನಂತರ ತೀರ್ಪು ಬರೆಯಲು ವಿಳಂಬ ಮಾಡುವುದು ತರವಲ್ಲ. ಪ್ರಕರಣ ಇತ್ಯರ್ಥಗೊಳಿಸಲು ವಿಳಂಬ ಮಾಡಿದರೆ ನಮ್ಮ ಸರ್ಕಾರ ಸಹಿಸಲ್ಲ. ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ: ಗ್ಯಾರಂಟಿ ಯೋಜನೆಗೆ 'SCSPTSP' ಅನುದಾನ ಬಳಕೆ: ಈವರೆಗೆ ಬಿಡುಗಡೆಯಾದ ಹಣ ಎಷ್ಟು?