ಬೆಂಗಳೂರು: ಸಚಿವ ಸ್ಥಾನ ಆಕಾಂಕ್ಷಿಗಳ ನೇತೃತ್ವದ ಶಾಸಕರ ತಂಡ, ಭೋಜನ ಕೂಟದ ನೆಪದಲ್ಲಿ ಸಭೆ ನಡೆಸಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಿದೆ.
ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ನಿವಾಸಕ್ಕೆ ರಾತ್ರಿ ಹಿರಿಯ ಶಾಸಕರಾದ ಉಮೇಶ್ ಕತ್ತಿ, ಬಸವನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ರಾಜುಗೌಡ, ಸಿ. ಪಿ. ಯೋಗೇಶ್ವರ್, ಅಂಗಾರ ಸೇರಿದಂತೆ 20-22 ಬಿಜೆಪಿ ಶಾಸಕರು ಆಗಮಿಸಿ ಸಭೆ ನಡೆಸಿದರು. ಭೋಜನ ಕೂಟದೊಂದಿಗೆ ಸಚಿವಾಕಾಂಕ್ಷಿಗಳು ಸಮಾಲೋಚನೆ ನಡೆಸಿದರು. ಬಜೆಟ್ ಅಧಿವೇಶನ ಮುಕ್ತಾಯಗೊಳ್ಳುತ್ತಿದ್ದಂತೆ ಮತ್ತೆ ಸಂಪುಟ ವಿಸ್ತರಣೆ ಸಾಧ್ಯತೆ ಹಿನ್ನಲೆಯಲ್ಲಿ ಸಿಎಂ ಮೇಲೆ ಈಗಿನಿಂದಲೇ ಒತ್ತಡ ಹೇರುವ ನಿರ್ಧಾರಕ್ಕೆ ಸಚಿವಾಕಾಂಕ್ಷಿಗಳು ಬಂದಿದ್ದಾರೆ ಎನ್ನಲಾಗಿದೆ.
ಶಾಸಕರ ಸಭೆ ನಡೆಯುತ್ತಿರುವ ಮಾಹಿತಿ ತಿಳಿದ ಮಾಧ್ಯಮಗಳು ಸಚಿವ ಶೆಟ್ಟರ್ ನಿವಾಸಕ್ಕೆ ಬರುತ್ತಿದ್ದಂತೆ ಸಭೆ ನಡೆಸುತ್ತಿದ್ದ ಶಾಸಕರೆಲ್ಲಾ ಅಲ್ಲಿಂದ ಕಾಲ್ಕಿತ್ತರು. ರಹಸ್ಯ ಸ್ಥಳಕ್ಕೆ ತೆರಳಿ ಮತ್ತೆ ಸಭೆ ನಡೆಸಲಿದ್ದಾರೆ ಎನ್ನಲಾಗಿದೆ.
ಆದರೆ, ಪ್ರತ್ಯೇಕ ಸಭೆ ವಿಷಯವನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಳ್ಳಿಹಾಕಿದ್ದಾರೆ. ಸಚಿವ ಶೆಟ್ಟರ್ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯತ್ನಾಳ್, 'ಕೇವಲ ಊಟಕ್ಕಾಗಿ ಎಲ್ಲರೂ ಸೇರಿದ್ದವು. ಸಭೆ ಇತ್ಯಾದಿ ಏನೂ ನಡೆದಿಲ್ಲ' ಎಂದರು.
ಇದರ ನಡುವೆ ಸಚಿವ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಶಾಸಕರು ಸೇರಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗಿದೆ. ಸಚಿವರು ಭೋಜನ ಕೂಟ ಏರ್ಪಡಿಸಿದ್ದರೆ ಎಲ್ಲಾ ಶಾಸಕರಿಗೂ ಆಹ್ವಾನ ನೀಡಬೇಕಿತ್ತು. ಆದರೆ, ಆಯ್ದ ಶಾಸಕರು ಮಾತ್ರ ಆಗಮಿಸಿದ್ದು, ಹೊಸ ಅನುಮಾನ ಹುಟ್ಟುವಂತೆ ಮಾಡಿದೆ. ಹಿರಿಯ ಶಾಸಕರಾದ ಉಮೇಶ್ ಕತ್ತಿ, ಮುರುಗೇಶ್ ನಿರಾಣಿ, ರಾಜುಗೌಡ ಸೇರಿದಂತೆ ಹಲವು ಸಚಿವಾಕಾಂಕ್ಷಿಗಳ ಪರ ಲಾಭಿ ನಡೆಸಲು ಈ ಸಭೆ ನಡೆಯಿತಾ ಎನ್ನುವ ಮಾತುಗಳು ಕೇಳಿಬರುತ್ತಿವೆ.