ಬೆಂಗಳೂರು : ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವಿರುದ್ಧ ಅಪಸ್ವರ ಎತ್ತಿರುವ ಬಿಜೆಪಿಯ ಅತೃಪ್ತ ಶಾಸಕರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಭೇಟಿಗೆ ಪಟ್ಟು ಹಿಡಿದಿದ್ದು, ಭೇಟಿಗೆ ಅವಕಾಶ ನೀಡದಿದ್ದರೆ ದೆಹಲಿಗೆ ತೆರಳಿ ಅಮಿತ್ ಶಾ ಮತ್ತು ಜೆ.ಪಿ ನಡ್ಡಾ ನಿವಾಸದ ಎದುರು ಧರಣಿ ನಡೆಸುವ ಎಚ್ಚರಿಕೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಪಕ್ಷದ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಉತ್ತರ ಕರ್ನಾಟಕಕ್ಕೆ ಅತಿವೃಷ್ಟಿ ಹಾನಿಗೆ ಪರಿಹಾರ ನೀಡಿಲ್ಲ. ಮಾಜಿ ಸಚಿವ ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ನೀಡಬೇಕು. ಅತೃಪ್ತ ಶಾಸಕರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಡಲಿದ್ದಾರೆ.
ಅತೃಪ್ತ ಶಾಸಕರು ರಹಸ್ಯ ಸಭೆ ನಡೆಸಿರುವ ಬಗ್ಗೆ ಉಮೇಶ್ ಕತ್ತಿ ಸಹೋದರ ರಮೇಶ ಕತ್ತಿ ಖಚಿತಪಡಿಸಿದ್ದಾರೆ. ಮುಖ್ಯಮಂತ್ರಿಗಳಿಗೆ ಸಭೆ ಬಗ್ಗೆ ಮಾಹಿತಿ ನೀಡಲಾಗಿತ್ತು, ಅಷ್ಟೆ ಅಲ್ಲದೆ ಗುರುವಾರ ಉಮೇಶ್ ಕತ್ತಿ ಮನೆಯಲ್ಲಿ ನಡೆದ ಸಭೆ ಮತ್ತು ಭೋಜನ ಕೂಟಕ್ಕೂ ಆಹ್ವಾನ ನೀಡಲಾಗಿತ್ತು ಎಂದು ತಿಳಿಸಿದ್ದಾರೆ.