ಬೆಂಗಳೂರು : ಮರಳಿ ಕಾಂಗ್ರೆಸ್ ಪಕ್ಷ ಸೇರುವಂತೆ ಎಸ್.ಟಿ.ಸೋಮಶೇಖರ್ ಅವರಿಗೆ ಬೆಂಬಲಿಗರು ಒತ್ತಾಯ ಮಾಡಿದ್ದು, ಸದ್ಯಕ್ಕೆ ಆತುರದ ನಿರ್ಧಾರ ಕೈಗೊಳ್ಳುವುದು ಬೇಡ, ಬಿಜೆಪಿ ವರಿಷ್ಠರ ಜೊತೆ ಮಾತುಕತೆ ನಡೆಸೋಣ. ಒಂದೆರಡು ದಿನ ಸಮಯ ಕೊಡಿ. ನಂತರ ನಿರ್ಧಾರ ಕೈಗೊಳ್ಳುತ್ತೇನೆ ಎಂದು ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಬೆಂಬಲಿಗರಿಗೆ ಆಶ್ವಾಸನೆ ನೀಡಿದ್ದಾರೆ. ಇದು ಎಸ್.ಟಿ.ಸೋಮಶೇಖರ್ ಬಿಜೆಪಿ ತೊರೆಯುತ್ತಾರೆ ಎನ್ನುವ ವದಂತಿಗೆ ಪುಷ್ಟಿ ನೀಡಿದೆ. ಬೆಂಬಲಿಗರ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಶ್ರೀನಿವಾಸ್ ಭಾಗಿಯಾಗಿರುವುದು 'ಆಪರೇಷನ್ ಹಸ್ತ'ದ ಸುಳಿವು ನೀಡಿದೆ.
ಹೇರೊಹಳ್ಳಿಯಲ್ಲಿರುವ ಕಚೇರಿಯಲ್ಲಿಂದು ಎಸ್.ಟಿ.ಸೋಮಶೇಖರ್ ಮಹತ್ವದ ಸಭೆ ನಡೆಸಿದರು. ಸಭೆಯಲ್ಲಿ ನೂರಾರು ಬೆಂಬಲಿಗರು ಭಾಗಿಯಾದರು. ಕಾಂಗ್ರೆಸ್ನ ನೆಲಮಂಗಲ ಶಾಸಕ ಎನ್.ಶ್ರೀನಿವಾಸ್ ಕೂಡ ಭಾಗಿಯಾಗಿದ್ದರು. ಡಿಕೆಶಿ ಆಪ್ತ ವರ್ಗದಲ್ಲಿ ಗುರುತಿಸಿಕೊಂಡಿರುವ ಶ್ರೀನಿವಾಸ್ ಈ ಸಭೆಯಲ್ಲಿ ಭಾಗಿಯಾಗಿರುವುದು ಸಾಕಷ್ಟು ಕುತೂಹಲಕ್ಕೆ ಕಾರಣವಾಯಿತು.
ಸಭೆ ಆರಂಭವಾಗುತ್ತಿದ್ದಂತೆ ಸ್ಥಳೀಯ ಬಿಜೆಪಿ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದ ಸೋಮಶೇಖರ್ ಬೆಂಬಲಿಗರು, ಪಕ್ಷದಲ್ಲಿ ನೆಲೆಯಾಗಲು ಅವಕಾಶ ನೀಡುತ್ತಿಲ್ಲ. ನಮ್ಮನ್ನು ಪಕ್ಷ ಬಿಟ್ಟು ಓಡಿಸಲು ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ ಬಿಜೆಪಿ ಬಿಡುವುದೇ ವಾಸಿ, ಮತ್ತೆ ಮರಳಿ ಕಾಂಗ್ರೆಸ್ ಸೇರಬೇಕು ಎಂದು ಒತ್ತಾಯಿಸಿದರು. ಎಲ್ಲ ಬೆಂಬಲಿಗರು ತಮ್ಮ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಎಲ್ಲವನ್ನೂ ಸೋಮಶೇಖರ್ ಆಲಿಸಿದ್ದಾರೆ.
ಬಳಿಕ ಸಭೆ ಉದ್ಧೇಶಿಸಿ ಮಾತನಾಡಿದ ಎಸ್.ಟಿ.ಸೋಮಶೇಖರ್, ಬಿಜೆಪಿಯಲ್ಲಿ ನನಗೆ ಸಮಸ್ಯೆಯಿಲ್ಲ. ಆದರೆ ಸ್ಥಳೀಯ ಬಿಜೆಪಿಗರಿಂದ ತೊಂದರೆಯಾಗುತ್ತಿದೆ. ಇದನ್ನು ನಾನು ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇನೆ. ಹೈಕಮಾಂಡ್ ನಾಯಕರ ಜೊತೆಗೂ ಮಾತುಕತೆ ನಡೆಸುತ್ತೇನೆ. ಆತುರದಲ್ಲಿ ನಿರ್ಧಾರ ಕೈಗೊಳ್ಳುವುದು ಬೇಡ. ಇನ್ನೊಂದೆರಡು ದಿನ ಸಮಯ ಕೊಡಿ, ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿ ನಂತರ ಮುಂದಿನ ರಾಜಕೀಯ ನಿರ್ಧಾರ ಕೈಗೊಳ್ಳೋಣ ಎಂದು ಬೆಂಬಲಿಗರಿಗೆ ಸಮಯಾವಕಾಶ ಕೇಳಿ ಇಂದಿನ ಸಭೆ ಮುಗಿಸಿದರು.
ಸಭೆಯ ನಂತರ ಮಾತನಾಡಿದ ಕಾಂಗ್ರೆಸ್ ಶಾಸಕ ಎನ್.ಶ್ರೀನಿವಾಸ್, ಸಭೆಯಲ್ಲಿ ನಾನೂ ಇದ್ದೆ. ಶಾಸಕರಿಗೆ ಒಂದು ತೀರ್ಮಾನ ಮಾಡಿ ಎಂದು ಬೆಂಬಲಿಗರು ಒತ್ತಾಯ ಮಾಡುತ್ತಿದ್ದಾರೆ. ಇಲ್ಲಿ ನಮಗೆ ಉಳಿಗಾಲ ಇಲ್ಲ, ಇಲ್ಲಿ ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಬೆಂಬಲಿಗರು ಹೇಳಿದ್ದಾರೆ. ಹಾಗಾಗಿ ಸೋಮಶೇಖರ್ ಸ್ವಲ್ಪ ಕಾಲ ಸಮಯ ಕೇಳಿದ್ದಾರೆ ಎಂದರು.
ಎಸ್ಟಿ ಸೋಮಶೇಖರ್ ಕರೆತರುವ ಟಾಸ್ಕ್?: ಡಿ.ಕೆ.ಶಿವಕುಮಾರ್ ಅವರು ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ಯಶವಂತಪುರ ಕ್ಷೇತ್ರದಲ್ಲಿ ಸೋಮಶೇಖರ್ ಅಥವಾ ಅವರ ಬೆಂಬಲಿಗರನ್ನು ಕಾಂಗ್ರೆಸ್ಗೆ ಕರೆತರಬೇಕು ಎಂದು ಟಾಸ್ಕ್ ಕೊಟ್ಟಿದ್ದಾರೆ. ಸೋಮಶೇಖರ್ ಬೆಂಬಲಿಗರು ಕಾಂಗ್ರೆಸ್ ಸೇರುವುದಾಗಿ ಹೇಳಿದ್ದಾರೆ. ಬೆಂಬಲಿಗರೇ ಬರ್ತೀವಿ ಅಂದ್ಮೇಲೆ ಸೋಮಶೇಖರ್ ಬಿಜೆಪಿಯಲ್ಲಿ ಇರಕ್ಕಾಗುತ್ತಾ?. ಸೋಮಶೇಖರ್ ಕೂಡ ಕಾಂಗ್ರೆಸ್ಗೆ ಬರುವ ನಿರೀಕ್ಷೆ ಇದೆ. ಸ್ಥಳೀಯವಾಗಿ ಇಲ್ಲಿ ಸೋಮಶೇಖರ್ ಮತ್ತು ಬೆಂಬಲಿಗರ ಕತ್ತು ಕುಯ್ಯುವ ಕೆಲಸ ಆಗುತ್ತಿದೆ. ಸೋಮಶೇಖರ್ ಬಿಜೆಪಿಯಲ್ಲಿ ಗೆದ್ದಿದ್ದು ಅವರ ಸ್ವಂತ ಬಲದಿಂದ ಅವರನ್ನು ಸೋಲಿಸಲು ಸ್ಥಳೀಯ ಬಿಜೆಪಿಯವರು ಜೆಡಿಎಸ್ ಜತೆ ಕೈ ಜೋಡಿಸಿದ್ದರು. ಸೋಮಶೇಖರ್ ಒಬ್ಬರು ಶಾಸಕರು, ಶಾಸಕರು ನಮ್ಮಲ್ಲಿ ಬರ್ತಾರೆ ಅಂದರೆ ಸಿದ್ದರಾಮಯ್ಯ ಅವರೂ ಒಪ್ಕೋತಾರೆ. ಆಗ ಸಿದ್ದರಾಮಯ್ಯ ಸೇರಿಸಿಕೊಳ್ಳಲ್ಲ ಅಂದರು. ಈಗ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಒಪ್ಪಿಕೊಳ್ಳಲಿದ್ದಾರೆ ಎಂದರು.
ನಂತರ ಮಾತನಾಡಿದ ಮಾಜಿ ಕಾರ್ಪೊರೇಟರ್ ಚಿಕ್ಕರಾಜು, ಎಸ್.ಟಿ.ಸೋಮಶೇಖರ್ ಜತೆ ಸಭೆ ನಡೆಸಿದ್ದೇವೆ. ಮೂರ್ನಾಲ್ಕು ದಿನ ಸಮಯಾವಕಾಶ ಕೇಳಿದ್ದಾರೆ. ಸ್ಥಳೀಯ ಬಿಜೆಪಿಯವರು ಬೆಳೆಯಲು ಬಿಡುತ್ತಿಲ್ಲ. ನೀವು ಗೆಲ್ಲಲೂ ಅವರು ಕೆಲಸ ಮಾಡಲ್ಲ. ಕಾಂಗ್ರೆಸ್ ಪಕ್ಷಕ್ಕೆ ಹೋಗೋಣ ಎಂದಿದ್ದೇವೆ. ಎರಡು ದಿನ ಸುಮ್ಮನಿರಿ. ಬಿಜೆಪಿ ಪಕ್ಷದ ವರಿಷ್ಠರ ಜತೆ ಮಾತಾಡುವೆ. ಸರಿಪಡಿಸುವೆ ಎಂದು ಹೇಳಿದ್ದಾರೆ. ಮೂರ್ನಾಲ್ಕು ದಿನದಲ್ಲಿ ಸೋಮಶೇಖರ್ ತೀರ್ಮಾನ ತಿಳಿಸದಿದ್ದರೆ ನಾವು ನಮ್ಮ ದಾರಿ ನೋಡಿಕೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನೂ ಓದಿ : ಎಸ್.ಟಿ.ಸೋಮಶೇಖರ್ ಪಕ್ಷಕ್ಕೆ ಬಂದ್ರೆ ಒಪ್ಪುತ್ತೇವೆ, ಪ್ರಗತಿಪರ ಚಿಂತಕರ ರಕ್ಷಣೆಗೆ ಕಮಿಷನರ್, ಡಿಜಿಪಿಗೆ ಸೂಚನೆ: ಡಾ.ಜಿ.ಪರಮೇಶ್ವರ್