ಬೆಂಗಳೂರು : ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಸತತ ಆರೋಪಗಳನ್ನು ಮಾಡುತ್ತಿದ್ದ ಜೆಡಿಎಸ್ ಶಾಸಕ ಸಾ.ರಾ ಮಹೇಶ್ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ. ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ಯೋಜನೆ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಪರಿಸರ ಸ್ನೇಹಿ ಬ್ಯಾಗ್ ಹಿಡಿದು ವಿಧಾನಸೌಧಕ್ಕೆ ಬಂದ ಸಾ ರಾ ಮಹೇಶ್, ಸಿಎಂ ಬಸವರಾಜ್ ಬೊಮ್ಮಾಯಿ ಹಾಗೂ ಸರ್ಕಾರದ ಮುಖ್ಯಕಾರ್ಯದರ್ಶಿ ಪಿ ರವಿಕುಮಾರ್ಗೆ ದೂರು ನೀಡಿದ್ದಾರೆ.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರೋಹಿಣಿ ಸಿಂಧೂರಿ ಅವರು ಜಿಲ್ಲಾಧಿಕಾರಿಯಾಗಿದ್ದಂತಹ ಸಂದರ್ಭದಲ್ಲಿ ಮೈಸೂರನ್ನು ಪ್ಲಾಸ್ಟಿಕ್ ಮುಕ್ತ ಮಾಡುವ ನೆಪದಲ್ಲಿ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮವೆಸಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಸಿಂಧೂರಿ ಮೇಲೆ ಸುಮಾರು 7 ರಿಂದ 8 ಪ್ರಕರಣ ಇವೆ. ಹೀಗಾಗಿ, ಅವರನ್ನು ಅಮಾನತು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಎಸ್ ಎಫ್ ಸಿ ಸ್ಟೇಟ್ ಫೈನಾನ್ಸ್ ಕಮಿಷನ್ ಮೂಲಕ ಬಟ್ಟೆ ಬ್ಯಾಗ್ ಖರೀದಿ ಮಾಡಲಾಗಿದೆ. ಗ್ರಾಮ ಪಂಚಾಯತಿ 2 ಲಕ್ಷ, ನಗರ ಸಭೆಗೆ 1.5 ಲಕ್ಷ. ಒಟ್ಟಾರೆ 14 ಲಕ್ಷ ಬ್ಯಾಗ್ ಖರೀದಿ ಮಾಡಲಾಗಿದೆ ಎಂದು ಆರೋಪಿಸಿದರು.
ಜನಪ್ರತಿನಿಧಿಗಳನ್ನು ಸಭೆಗೆ ಕರೆದು ಕ್ರಿಯಾ ಯೋಜನೆ ಮಾಡಿ ಅಲ್ಲೇ ತೀರ್ಮಾನ ಮಾಡುವ ಯೋಜನೆ ಅದು. ಗ್ರಾಮ ಪಂಚಾಯತಿಯಲ್ಲೇ ತೀರ್ಮಾನ ಮಾಡಬೇಕು. ನಗರ ಸಭೆ ಕ್ರಿಯಾ ಯೋಜನೆ ಮಾಡಿ ನೀಡಬೇಕು. ನಗರ ಪಾಲಿಕೆ ಕ್ರಿಯಾ ಯೋಜನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಕಲಿಸಬೇಕು. ಆದರೆ, ಇವರು ಮಾರ್ಚ್ 4 ರಂದು ಸಭೆ ಕರೆದು ಜಿಲ್ಲೆ ಮತ್ತು ನಗರದ ಪ್ಲಾಸ್ಟಿಕ್ ರಹಿತ ಬ್ಯಾಗ್ ಕೊಡ್ತೀವಿ ಅಂತ ಹೇಳಿದ್ರು.
ಬ್ಯಾಗನ್ನು ಸಿಎಂ ಗೆ ತೋರಿಸಿದ್ದೇನೆ. 10 ಕೆಜಿ ಹಾಗೂ 5 ಕೆ.ಜಿ ಬ್ಯಾಗ್ ಎರಡಕ್ಕೂ 52 ರೂ. ನೀಡಿದ್ದಾರೆ. ಜಿಎಸ್‌ಟಿ ಸೇರಿ 9 ರೂಪಾಯಿ. ಆದರೆ, ಅವರು 52ರೂ ಗೆ ಖರೀದಿ ಮಾಡಿದ್ದಾರೆ. ವಾಸ್ತವ ಬೆಲೆ ಜಿಎಸ್‌ಟಿ ಸೇರಿ 12 ರೂ. ಆಗುತ್ತದೆ. ಬಲ್ಕ್ ಆಗಿ ಖರೀದಿಸಿದರೆ 8 ರೂ.ಗೆ ಸಿಗಲಿದೆ. 6.18 ಕೋಟಿ ರೂ.ಗೆ ಬ್ಯಾಗ್ ಖರೀದಿ ಮಾಡಿದ್ದಾರೆ. ಎಲ್ಲರ ಅಧಿಕಾರ ಮೊಟಕುಗೊಳಿಸಿ ಖರೀದಿ ಮಾಡಲಾಗಿದೆ. ಅಧಿಕಾರ ದುರುಪಯೋಗ ಆಗಿದೆ. ಹಾಗಾಗಿ, ರೋಹಿಣಿ ಸಿಂಧೂರಿ ಅವರನ್ನು ಅಮಾನತು ಮಾಡಲು ಮನವಿ ಮಾಡಿದ್ದೇವೆ ಎಂದು ಹೇಳಿದರು.
ಓದಿ: ವಾಹನ ಟೋಯಿಂಗ್ ಮಾಡುವಾಗ ನಿಯಮಾವಳಿ ಪಾಲಿಸಿ : ಟ್ರಾಫಿಕ್ ಪೊಲೀಸರಿಗೆ ಗೃಹ ಸಚಿವರ ಸೂಚನೆ