ಬೆಂಗಳೂರು: ಮೀಸಲಾತಿ ವಿಚಾರದಲ್ಲಿ ದೊಡ್ಡ ಮೀನು ಸಣ್ಣ ಮೀನನ್ನು ತಿನ್ನಬಾರದು. ದೊಡ್ಡ ಮೀನು ಸಣ್ಣ ಮೀನನ್ನ ತಿಂದ್ರೆ ಸಾಮಾಜಿಕ ನ್ಯಾಯ ಸಿಕ್ಕಂತಾಗಲ್ಲ ಎಂದು ಶಾಸಕ ಎನ್.ಮಹೇಶ್ ಆತಂಕ ವ್ಯಕ್ತಪಡಿಸಿದರು.
ವಿಧಾನಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಸಣ್ಣ ಮೀನುಗಳಿಗೆ ಪ್ರತ್ಯೇಕ ಮೀಸಲಾತಿ ಕೊಡಿ. ಲಿಂಗಾಯತರು, ಒಕ್ಕಲಿಗರು, ಕುರುಬರಿಗೆ ಮೀಸಲಾತಿ ಕೊಡುವುದಕ್ಕೆ ನಾನು ವಿರೋಧಿಸುತ್ತಿಲ್ಲ. ಆದರೆ ಸಣ್ಣ ಜಾತಿಯವರ ಮೀಸಲಾತಿಯಲ್ಲಿ ದೊಡ್ಡ ಜಾತಿಯವರನ್ನು ಸೇರಿಸಬೇಡಿ. ಆಗ ಸಣ್ಣ ಜಾತಿಯವರಿಗೆ ಇರೋ ಮೀಸಲಾತಿಯೂ ಸಿಗಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಖಾಸಗೀಕರಣ ತಡೆಯಲು ಸಾಧ್ಯವಿಲ್ಲ. ಆದರೆ ಖಾಸಗೀಕರಣದ ಒಳಗಡೆ ಮೀಸಲಾತಿ ನೀಡಬೇಕು. ಈ ಬಗ್ಗೆ ನಿಯಮ ಜಾರಿಯಾಗಬೇಕು. ಮೀಸಲಾತಿ ಬಡತನ ನಿರ್ಮೂಲನಾ ಕಾರ್ಯಕ್ರಮವಲ್ಲ. ಈಗ ಬ್ರಾಹ್ಮಣರಿಂದ ಹಿಡಿದು ಕುರುಬರವರೆಗೆ ಮೀಸಲಾತಿ ಕೇಳುತ್ತಿದ್ದಾರೆ. ಸದಾಶಿವ ಆಯೋಗ ವರದಿಯನ್ನು ಚರ್ಚೆ ಮಾಡಬೇಕು. ಅದನ್ನು ಚರ್ಚೆಗೆ ತರುತ್ತಿಲ್ಲ. ಕಾಂತರಾಜು ಅವರ ಜಾತಿವಾರು ವರದಿ ಮಂಡನೆ ಮಾಡಿ. ವರದಿ ಒಂದು ವೇಳೆ ಅವೈಜ್ಞಾನಿಕವಾಗಿದ್ದರೆ ಅದನ್ನು ತಿರಸ್ಕರಿಸಿ ಎಂದರು.
ಈ ಬಜೆಟ್ನಲ್ಲಿ ಕೆಲ ಸಾಕಾರಾತ್ಮಕ ಅಂಶ ಇದೆ. ಇನ್ನು ಕೆಲವು ನಕಾರಾತ್ಮಕ ಅಂಶಗಳಿವೆ. ನಕಾರಾತ್ಮಕ ಅಂಶಗಳ ಬಗ್ಗೆ ಸರ್ಕಾರ ಆತ್ಮಾವಲೋಕನ ಮಾಡಬೇಕು. ಸಕಾರತ್ಮಕ ಅಂಶಗಳನ್ನು ಪ್ರತಿಪಕ್ಷಗಳು ಶ್ಲಾಘಿಸಬೇಕು ಎಂದರು.
ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇರಬೇಕು:
ಮೀಸಲಾತಿ ಸಂಬಂಧ ಪ್ರತಿಕ್ರಿಯಿಸಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಗ್ಲೋಬಲ್ ಇನ್ವೆಸ್ಟ್ ಮೀಟ್ ನಮ್ಮ ಅವಧಿಯಲ್ಲಿ ಆಗಿದೆ. ಇದರ ಉದ್ದೇಶ ಖಾಸಗಿ ಬಂಡವಾಳ ಬಂದು ಉದ್ಯೋಗ ಹೆಚ್ಚಳ ಆಗಬೇಕು ಎಂಬುದು. ಇದರ ಹೊರತಾಗಿ ಮೀಸಲಾತಿಗೆ ತೆಗೆದು ಬಿಡಿ ಎಂದು ಅರ್ಥ ಅಲ್ಲ. ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಇರಬೇಕು ಎಂಬುವುದು ನನ್ನ ವಾದ. ಕೇಂದ್ರ ಸರ್ಕಾರದ ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ತರಲು ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.
ಈ ವರ್ಷ 1.5 ಲಕ್ಷ ಕೋಟಿ ರೂ. ಖಾಸಗಿ ವಲಯದಲ್ಲಿ ಹೂಡಿಕೆ ಆಗ್ತಿದೆ. ಖಾಸಗಿ ವಲಯದಲ್ಲಿ ಮೀಸಲಾತಿ ಸಿಗಲು ಕೇಂದ್ರ ಸರ್ಕಾರ ನಿಯಮಗಳಲ್ಲಿ ತಿದ್ದುಪಡಿ ತರಬೇಕಾಗುತ್ತದೆ. ಈಗ ಬೇರೆ ಬೇರೆ ಕ್ಷೇತ್ರಗಳು ಖಾಸಗೀಕರಣ ಆಗುತ್ತಿವೆ. ಕೇಂದ್ರವೇ ಹಲವು ಸಂಸ್ಥೆಗಳನ್ನು ಖಾಸಗಿಯವ್ರಿಗೆ ಕೊಡುತ್ತಿದೆ. ಹೀಗಾದರೆ ಮೀಸಲಾತಿ ಕ್ರಮೇಣ ಮರೀಚಿಕೆ ಆಗುತ್ತದೆ. ಈಗ ಮೀಸಲಾತಿಗೆ ಬೇಡಿಕೆ ಹೆಚ್ಚು ಕೇಳಿ ಬರುತ್ತಿದ್ದರೂ ಖಾಸಗೀಕರಣ ಹೆಚ್ಚಾದ ಹಾಗೆ ಮೀಸಲಾತಿಯೂ ಕಡಿಮೆ ಆಗುತ್ತದೆ ಎಂದರು.