ಬೆಂಗಳೂರು: ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನ ನನಗೆ ಬಂದ ಪುಟ್ಟ ಹೋದ ಪುಟ್ಟ ತರಹ. ಈ ಸ್ಥಾನ ನನಗೆ ಅವಶ್ಯಕತೆ ಇಲ್ಲ ಎಂದು ಎಂ.ಪಿ.ರೇಣುಕಾಚಾರ್ಯ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಚೇಂಬರ್ ಮತ್ತು ಚೇರು ಬಿಟ್ಟರೆ ಏನೂ ಇಲ್ಲ. ಇದರಲ್ಲಿ ಕೆಲಸ ಮಾಡೋಕೂ ಏನೂ ಇಲ್ಲ. ಸಿಎಂ ರಾಜಕೀಯ ಕಾರ್ಯದರ್ಶಿ ಸ್ಥಾನಗಿಂತ ನಾನು ಶಾಸಕನಾಗೇ ಇರುತ್ತೇನೆ ಎಂದರು.
ರಾಜ್ಯ ರಾಜಕೀಯದಲ್ಲಿ ಬದಲಾವಣೆ ಆಗುತ್ತದೆ ಎಂಬ ಯತ್ನಾಳ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಮುಖ್ಯಮಂತ್ರಿ ಹೊರತುಪಡಿಸಿ ಉಳಿದೆಲ್ಲ ಬದಲಾವಣೆ ನಿಶ್ಚಿತ. ಅಭಿವೃದ್ಧಿ ದೃಷ್ಟಿಯಿಂದ ಬದಲಾವಣೆ ಅಗತ್ಯ ಎಂದು ಇದೇ ವೇಳೆ ಪ್ರತಿಪಾದಿಸಿದರು.
ನಾಡಿನ ಜನತೆ ಕ್ಷಮೆಯಾಚಿಸಿ:
ಕೊರೊನಾ ಮಧ್ಯೆ ಪಾದಯಾತ್ರೆ ಮಾಡಿದ ಕಾಂಗ್ರೆಸ್ ನಾಯಕರು ನಾಡಿನ ಜನರ ಕ್ಷಮೆಯಾಚಿಸಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದರು. ನಾಟಕೀಯವಾಗಿ ಹಾಗೂ ಸರ್ಕಾರವನ್ನ ಅಸ್ತಿರ ಮಾಡಲು, ಬಿಜೆಪಿಗೆ ಕೆಟ್ಟ ಹೆಸರು ತರಲು ಪಾದಯಾತ್ರೆ ಮಾಡಿದ್ರು. ಸಿದ್ದರಾಮಯ್ಯಗೆ ಪಾದಯಾತ್ರೆ ಬಗ್ಗೆ ಇಷ್ಟ ಇರಲಿಲ್ಲ. ಡಿಕೆಶಿ ನಾಯಕರಾಗಿ ಎಲ್ಲಿ ಹೊರ ಹೊಮ್ಮುತ್ತಾರೆ ಅಂತಾ ಅನಿಸ್ತಿತ್ತು.
ಡಿಕೆಶಿಯನ್ನ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡ್ತಾರೆ ಅನ್ನೋ ಆತಂಕ ಇತ್ತು. ಹೀಗಾಗಿ ಪಾದಯಾತ್ರೆಯಲ್ಲಿ ಭಾಗವಹಿಸಿದರು. ಕಾಂಗ್ರೆಸ್ನವರಿಗೆ ಪಾದಯಾತ್ರೆ ಅಭ್ಯಾಸ ಇರಲಿಲ್ಲ. ಹೇಗಿದ್ರೂ ಬಂಧಿಸುತ್ತಾರೆ ಎಂಬ ನಂಬಿಕೆ ಇತ್ತು ಎಂದು ಟೀಕಿಸಿದರು.
ಡಿಕೆಶಿ ಪಾದಯಾತ್ರೆ ರಿಹರ್ಸಲ್ ಮಾಡಿದ್ರು:
ಹಿಂದೆ ನಮ್ಮ ನಾಯಕ ಬಿ.ಎಸ್. ಯಡಿಯೂರಪ್ಪ ಹೋರಾಟ ಮಾಡಿ, ದಕ್ಷಿಣ ಭಾರತದಲ್ಲಿ ಬಿಜೆಪಿಯನ್ನ ಅಧಿಕಾರಕ್ಕೆ ತಂದ್ರು. ಡಿ.ಕೆ ಶಿವಕುಮಾರ್ ಹೊಸ ಟ್ರಾಕ್ ಪ್ಯಾಂಟ್, ಶೂ ಎಲ್ಲಾ ಖರೀದಿಸಿದ್ದರು. ರ‍್ಯಾಂಪ್ ವಾಕ್ ಮಾಡಿ ರಿಹರ್ಸಲ್ ಮಾಡ್ತಿದ್ರು. ನಮ್ಮ ಹಳ್ಳಿ ಕಡೆ ತಾಲೀಮು ಮಾಡಿಸಿದ ಬಳಿಕ, ನಾಟಕ ಪರದೆ ಮೇಲೆ ತರ್ತಿದ್ರು. ಹಾಗೆ ಡಿಕೆಶಿ ಪಾದಯಾತ್ರೆ ರಿಹರ್ಸಲ್ ಮಾಡಿದು ಎಂದು ವ್ಯಂಗ್ಯವಾಡಿದರು.
ಕೋರ್ಟ್ ಸೂಚನೆ ಮೇರೆಗೆ ಪಾದಯಾತ್ರೆ ನಿಲ್ಲಿಸಿದ್ರು. ಹೋದ ಕಡೆಯಲ್ಲೆಲ್ಲ ಗಂಡಸ್ತನ, ತಾಕತ್ತು ಅಂತಾ ಮಾತಾಡ್ತಿದ್ರು. ಅಧಿಕಾರದಲ್ಲಿ ಇದ್ದಾಗ ಗಂಡಸ್ತನ ತೋರಿಸಲಿಲ್ಲ, ಅಭಿವೃದ್ಧಿ ವಿಚಾರದಲ್ಲಿ. ಈ ಮಾತು ನಿಮಗೆ ಶೋಭೆ ತರುತ್ತದೆಯಾ?. ಅಂದು ಅಭಿವೃದ್ಧಿ ವಿಚಾರದಲ್ಲಿ ಗಂಡಸ್ತನ ತೋರಿಸಿದ್ದರೆ, ಇಂದು ನಾಟಕೀಯ ಪ್ರದರ್ಶನ ಬೇಕಿರಲಿಲ್ಲ ಎಂದು ರೇಣುಕಾಚಾರ್ಯ ಕಿಡಿಕಾರಿದರು.
ಇನ್ನು 2023ಕ್ಕೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಕೇಂದ್ರದ ಮಾದರಿಯಲ್ಲೇ ನೀವು ಪ್ರತಿ ಪಕ್ಷದ ಸ್ಥಾನದಲ್ಲಿ ಕೂರಲು ನೀವು ರೆಡಿಯಾಗಿ ಎಂದು ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ: ಅಮೃತ ಕ್ರೀಡಾ ಯೋಜನೆ ಈಡೇರಿಸುವ ಅಭಯ ನೀಡಿದ ಸಿಎಂ ಬಸವರಾಜ್ ಬೊಮ್ಮಾಯಿ