ಬೆಂಗಳೂರು: ಇನ್ನು ಮುಂದೆ ಎಲ್ಲ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಕಲ್ಲುಗಣಿಗಾರಿಕೆ ನಡೆಸುವಲ್ಲಿ ಜಾರಿಯಲ್ಲಿರುವ ಕಾನೂನಿನಂತೆ ಅಗತ್ಯ ಅನುಮತಿ ಪಡೆದುಕೊಳ್ಳಬೇಕು. ಗಣಿಗಾರಿಕೆಯಿಂದ ಸಂಗ್ರಹವಾಗುವ ರಾಜಧನದ ಮೊತ್ತವನ್ನು ತಪ್ಪದೇ ಪ್ರಾಧಿಕಾರಕ್ಕೆ ನಿಗದಿತ ಸಮಯದಲ್ಲಿ ಜಮೆ ಮಾಡುವಂತೆ ಕರ್ನಾಟಕ ವಿಧಾನಮಂಡಲದ ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಮಿತಿ ಶಿಫಾರಸು ಮಾಡಿದೆ.
ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿ ಅಧ್ಯಕ್ಷ ಜಿ. ಸೋಮಶೇಖರ್ ರೆಡ್ಡಿ ಅವರು ಇಂದು ವಿಧಾನಸಭೆಯಲ್ಲಿ ಸಮಿತಿಯ ವರದಿಯನ್ನು ಒಪ್ಪಿಸಿದರು. 1980ರಿಂದ 2012ರವರೆಗೆ ಚಿನಕುರಳಿ ಮತ್ತು ಹೊನಗನಹಳ್ಳಿ ಗ್ರಾಪಂಗಳಿಗೆ ವಿಧಿಸಿರುವ ದಂಡವನ್ನು ಒಳಗೊಂಡ ರಾಜಧನವನ್ನು ಮನ್ನಾ ಮಾಡಲು ಕ್ರಮ ಕೈಗೊಳ್ಳುವಂತೆ ಸಮಿತಿ ಶಿಫಾರಸು ಮಾಡಿದೆ.
ಎರಡೂ ಪಂಚಾಯ್ತಿಗಳ ವ್ಯಾಪ್ತಿಯಡಿ ನಡೆಸಲಾದ ಕಲ್ಲು ಗಣಿಗಾರಿಕೆಯ ವ್ಯವಹಾರದ ಪ್ರಕ್ರಿಯೆಗೆ ಸಂಬಂಧಿಸಿದಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ರಾಜಧನ ಮತ್ತು ದಂಡದ ಮೊತ್ತ ವಿಧಿಸಿದೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯ ನಿರ್ದೇಶನದಂತೆ ಮಂಡ್ಯ ಜಿಪಂ ಸಿಇಒ ರಚಿಸಿರುವ ಉನ್ನತಾಧಿಕಾರಿಗಳ ಸಮಿತಿಯು ಸಮಗ್ರವಾಗಿ ಪರಿಶೀಲಿಸಿ ರಾಜಧನ ಮನ್ನಾ ಮಾಡಲು ವರದಿ ಸಲ್ಲಿಸಿದೆ.
ಆ ವರದಿ ಅನ್ವಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ಇಲಾಖೆಯು ರಾಜಧನವನ್ನು ಮನ್ನಾ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿರುವುದರಿಂದ ಎರಡೂ ಪಂಚಾಯಿತಿಗೆ ವಿಧಿಸಿರುವ ದಂಡ ಮತ್ತು ರಾಜಧನವನ್ನು ಮನ್ನಾ ಮಾಡುವಂತೆ ಶಿಫಾರಸು ಮಾಡಲಾಗಿದೆ.
ಓದಿ: ರಸ್ತೆ ಇದ್ದರೂ ಬರಲ್ಲ ಬಸ್.. ಕಿಲೋಮೀಟರ್‌ಗಟ್ಟಲೇ ಕಾಲ್ನಡಿಗೆಯಲ್ಲಿ ಸಾಗುವ ವಿದ್ಯಾರ್ಥಿಗಳು..