ಬೆಂಗಳೂರು: ಪುಲಿಕೇಶಿ ನಗರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಮನೆ, ಕಚೇರಿ ಮೇಲೆ ಗುಂಪೊಂದು ಕಲ್ಲು ತೂರಾಟ ನಡೆಸಿ, ಬೆಂಕಿ ಹಚ್ಚಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಅಖಂಡ ಶ್ರೀನಿವಾಸ್ ಮೂರ್ತಿ ವಿಡಿಯೋ ಮಾಡಿ ಶಾಂತಿ ಕಾಪಾಡುವಂತೆ ಮನವಿ ಮಾಡಿದ್ದಾರೆ.
ಗಲಾಟೆ ವಿಕೋಪಕ್ಕೆ ಹೋಗುತ್ತಿದ್ದಂತೆ ಅರಿತ ಶಾಸಕರು ಯಾರೋ ಕಿಡಿಗೇಡಿಗಳು ಮಾಡಿರುವ ತಪ್ಪು ಇದಾಗಿದೆ. ಇದರಿಂದ ನಾವು ಜಗಳ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಅಣ್ಣ ತಮ್ಮಂದಿರಿದ್ದಂತೆ. ತಪ್ಪು ಯಾರೇ ಮಾಡಿದ್ದರೂ ಶಿಕ್ಷೆಯಾಗಲಿ. ಅವರಿಗೆ ಕಾನೂನು ರೀತಿ ಪೊಲೀಸರು ಶಿಕ್ಷೆ ಕೊಡ್ತಾರೆ. ನಾವೆಲ್ಲರೂ ಶಾಂತಿಯಿಂದ ವರ್ತಿಸೋಣ ಎಂದು ಶಾಸಕ ಅಖಂಡ ಶ್ರೀನಿವಾಸ್ ಮೂರ್ತಿ ಮನವಿ ಮಾಡಿದ್ದಾರೆ.
ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ, ಕಚೇರಿ ಮೇಲೆ ಕಲ್ಲು; ಸ್ಥಳದಲ್ಲಿ ಬಿಗುವಿನ ವಾತಾವರಣ
ಶಾಸಕರ ಸಂಬಂಧಿಕರೊಬ್ಬರು ಒಂದು ಸಮುದಾಯದ ಕುರಿತು ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದರಂತೆ. ಈ ಪೋಸ್ಟ್ ಹಾಕಿದ ನಂತರ ಅವರು, ನನ್ನ ಅಕೌಂಟ್ ಹ್ಯಾಕ್ ಆಗಿದೆ. ನಾನು ಈ ಪೋಸ್ಟ್ ಮಾಡಿಲ್ಲ ಎಂದು ರೀ ಪೋಸ್ಟ್ ಮಾಡಿದ್ದಾರೆ. ಅವಹೇಳನಕಾರಿ ಕಾಮೆಂಟ್ ಆರೋಪ ಬೆನ್ನಲೇ ಡಿ.ಜೆ ಹಳ್ಳಿ ಹಾಗೂ ಕೆ.ಜಿ.ಹಳ್ಳಿ ಠಾಣೆ ಮುಂದೆ ಜನರು ಗುಂಪುಗೂಡಿದ್ದಾರೆ. ಒಂದು ಸಮುದಾಯದ ಭಾವನೆಗಳಿಗೆ ಧಕ್ಕೆಯಾಗಿದೆ. ನ್ಯಾಯ ಒದಗಿಸಿ ಎಂದು ಠಾಣೆ ಬಳಿ ಜಮಾವಣೆಗೊಂಡಿದ್ದಾರೆ. ಪರಿಸ್ಥಿತಿ ಬಿಗಾಡಾಯಿಸುತ್ತಿದ್ದಂತೆ ಸ್ಥಳದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.