ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿರುದ್ಧ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಶಾಸಕರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ಡಿ .ಕೆ ಶಿವಕುಮಾರ್ ಅವರು ಏಕೆ ಹೀಗೆ ಮಾಡ್ತಾ ಇದಾರೋ ಗೊತ್ತಿಲ್ಲ. ಶಾಸಕನಾಗಿರೋ ನಮಗೆ ಹೀಗಾದ್ರೆ ಹೇಗೆ. ನಮ್ಮ ಕ್ಷೇತ್ರದಲ್ಲಿ ಸಂಪತ್ ರಾಜ್ ಹಾಗೂ ಜಾಕಿರ್ಗೆ ಯಾವುದೇ ಟಿಕೆಟ್ ನೀಡಬಾರದು ಎಂದಿದ್ದಾರೆ.
ನಮಗೆ ತೊಂದರೆ ಕೊಟ್ಟವರು ಹಾಗೂ ಮನೆಗೆ ಬೆಂಕಿ ಇಟ್ಟವರ ಜತೆ ಹೇಗೆ ಕೆಲಸ ಮಾಡೋದು. ಡಿ.ಕೆ ಶಿವಕುಮಾರ್ ಎಲ್ಲೂ ನಮ್ಮ ಪರವಾಗಿ ಹೇಳಿಕೆ ನೀಡುತ್ತಿಲ್ಲ. ನಮ್ಮ ಪರವಾಗಿ ಹೇಳಿಕೆ ನೀಡುವಂತೆ ಮನವಿ ಮಾಡಿಕೊಳ್ತೇನೆ. ನಾನು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರಲ್ಲಿ ನ್ಯಾಯ ಕೊಡಿಸುವಂತೆ ಮನವಿ ಮಾಡ್ತೇನೆ ಎಂದರು.
ಆಗಸ್ಟ್ 11ರಂದು ನನ್ನ ಮನೆ, ಪೊಲೀಸ್ ಠಾಣೆ, ಸಾರ್ವಜನಿಕ ವಾಹನಕ್ಕೆ ಬೆಂಕಿ ಇಟ್ಟರು. ಆರೋಪಿಗಳು ತಪ್ಪಿಸಿಕೊಂಡಿದ್ದಾರೆ, ಅವರಿಗೆ ತಕ್ಕ ಶಿಕ್ಷೆ ಕೊಡಿಸಬೇಕು. ಗೃಹ ಮಂತ್ರಿಗಳು ಆದಷ್ಟು ಬೇಗ ಅವರನ್ನ ಬಂಧಿಸಲು ಸೂಚಿಸಬೇಕು. ಒಬ್ಬ ಶಾಸಕನ ಮನೆಗೆ ಬೆಂಕಿ ಇಡ್ತಾರೆ ಅಂದ್ರೆ ಏನರ್ಥ? ಅಮಾಯಕರನ್ನು ಬಂಧಿಸಲಾಗಿದೆ ಅಂತಾ ಕೆಲವರು ನನ್ನ ಬಳಿ ಮನವಿ ಮಾಡಿದ್ದಾರೆ. ತಪ್ಪು ಮಾಡಿದ್ರೆ ಶಿಕ್ಷೆ ಕೊಡಬೇಕು. ಆದರೆ ನಿರಪರಾಧಿಗಳನ್ನು ಬಂಧಿಸಬಾರದು ಎಂದರು.