ಬೆಂಗಳೂರು: ಕಾರ್ಮಿಕ ಇಲಾಖೆಯ ದಿನಸಿ ಕಿಟ್ಗಳು ದುರುಪಯೋಗವಾಗಿದ್ದರೆ ತನಿಖೆ ಮಾಡಿ ಎಂದು ನಾನೇ ಆದೇಶ ಮಾಡಿದ್ದೇನೆ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿಸಿದರು.
ರಾಮಮೂರ್ತಿ ನಗರದಲ್ಲಿ ಕಾರ್ಮಿಕ ಇಲಾಖೆ ದಿನಸಿ ಕಿಟ್ಗಳನ್ನು ಭೈರತಿ ಬಸವರಾಜ ಅವರು ಅಕ್ರಮವಾಗಿ ದಾಸ್ತಾನು ಮಾಡಿದ್ದರು ಎಂಬ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ಬಸವರಾಜ್, ಇದು ಸತ್ಯಕ್ಕೆ ದೂರವಾದ ಮಾತು. ಕೆಆರ್ ಪುರಂ ಕ್ಷೇತ್ರದಲ್ಲಿ 50 ಸಾವಿರ ಬಡವರಿಗೆ ಸ್ವಂತ ಖರ್ಚಿನಲ್ಲಿಯೇ ದಿನಸಿ ಕಿಟ್ ಕೊಟ್ಟಿದ್ದೇನೆ. ಇಂತಹದರಲ್ಲಿ 700 ಕಿಟ್ ದುರುಪಯೋಗ ಮಾಡಿಕೊಂಡಿದ್ದೇನೆ ಎಂಬುದು ಶುದ್ಧ ಸುಳ್ಳು. ರಾಜಕೀಯಕ್ಕಾಗಿ ಈ ರೀತಿಯ ಹೇಳಿಕೆ ಕೊಡುವುದು ಸರಿಯಲ್ಲ ಎಂದು ತಿರುಗೇಟು ನೀಡಿದರು.
ನಾನು ಕಾರ್ಮಿಕ ಇಲಾಖೆ ವತಿಯಿಂದ ಬಂದಿರುವ ಯಾವುದೇ ಕಿಟ್ ಹಂಚಿಕೆ ಮಾಡಿಲ್ಲ. ನಾನು, ನಮ್ಮ ಮುಖಂಡರು ಹಾಗೂ ಪಾಲಿಕೆ ಸದಸ್ಯರು ಕೊಟ್ಟ ಕಿಟ್ ಮಾತ್ರ ಹಂಚಿಕೆ ಮಾಡಿದ್ದೇನೆ. ಯಾವುದೇ ಕಾರ್ಮಿಕ ಇಲಾಖೆ ಕಿಟ್ಗಳನ್ನು ಮಾರಿಕೊಳ್ಳುವಷ್ಟು ಕೆಳಮಟ್ಟಕ್ಕೆ ನಾನು ಬಂದಿಲ್ಲ. ರಾಜಕೀಯವಾಗಿ ನನ್ನ ಮುಖಕ್ಕೆ ಮಸಿ ಬಳಿಯಲು ಈ ರೀತಿ ಮಾಡಿದ್ದಾರೆ ಎಂದರು.
ಲೋಟಸ್ ಕನ್ವೆಂಷನ್ ಹಾಲ್ನಲ್ಲಿ ಏನಾಗಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದು, ತಪ್ಪು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾನೇ ಒತ್ತಾಯಿಸಿದ್ದೇನೆ ಎಂದರು. ಸಿದ್ದರಾಮಯ್ಯ ಅವರು ಹಿರಿಯರು, ಅವರ ಈ ಹೇಳಿಕೆ ಬೇಸರ ತಂದಿದೆ ಎಂದರು.