ಬೆಂಗಳೂರು : ಮೂಟೆ ಹೊರುವವರಿಗೆ ಯಾವುದಾದರೂ ಒಂದೇನೆ. ಭಾರ ಹೊರುವವರಿಗೆ ಏನು ಆಗುವುದಿಲ್ಲ ಎಂದು ಸಚಿವ ವಿ.ಸೋಮಣ್ಣ ತಿಳಿಸಿದರು. ವಿಧಾನಸೌಧದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ನೇಮಕ ಸಂಬಂಧ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸುತ್ತಾ, ನಮ್ಮ ಹೈಕಮಾಂಡ್ ಅಂತರಾಳದಲ್ಲಿ ಏನಿದೆ ಎಂಬುದು ಗೊತ್ತಿಲ್ಲ. ಬೇರೆ ಬೇರೆ ಬಿಜೆಪಿ ಸರ್ಕಾರ ಇರುವ ರಾಜ್ಯದಲ್ಲೂ ಈ ರೀತಿ ಮಾಡುತ್ತಿದ್ದಾರೆ ಎಂಬುದು ನನಗೆ ಇರುವ ಮಾಹಿತಿ. ಕರ್ನಾಟಕದಲ್ಲಿ ಅದನ್ನು ಮಾಡಿದ್ದಾರೆ.
ಸಿಎಂ ಅದನ್ನು ಕಾರ್ಯರೂಪಕ್ಕೆ ತಂದಿದ್ದಾರೆ. ಮೂಟೆ ಹೊರುವವರಿಗೆ ಯಾವುದಾದರೂ ಒಂದೇನೆ. ಭಾರ ಹೊರುವವರಿಗೆ ಏನೇನು ಆಗುವುದಿಲ್ಲ. ನಿಜ, ನಾನು ಬೆಂಗಳೂರು ಉಸ್ತುವಾರಿ ಕೇಳಿದ್ದೆ. ಆದರೆ, ಸಿಎಂ ಉತ್ತಮ ಕೆಲಸ ಮಾಡುತ್ತಿದ್ದಾರೆ. ಅದರಂತೆ ವರಿಷ್ಠರ ಸೂಚನೆಯಂತೆ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿಸಿದರು.
ಆರ್.ಅಶೋಕ್‌ಗೆ ಉಸ್ತುವಾರಿ ನೀಡದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಶೋಕ್ ಅವರು ಸಾಮ್ರಾಟರು. ನಮಗೆಲ್ಲ ಬೇಕಾದವರು. ಅವರನ್ನು ನಾವ್ಯಾರು ಸುಮ್ಮನೆ ಕೂರುವುದಕ್ಕೆ ಬಿಡುವುದಿಲ್ಲ. ನಾವೆಲ್ಲ ಒಟ್ಟಾಗಿ ಸೇರಿ ಕೆಲಸ ಮಾಡುತ್ತೇವೆ ಎಂದರು.
ಸಿಎಂ ಬಳಿ ಬೆಂಗಳೂರು ಉಸ್ತುವಾರಿ ಇರುವುದು ನೂರಕ್ಕೆ ನೂರು ಸರಿ. ಬೇರೆ ಜಿಲ್ಲೆಗಳಿಗೆ ಉಸ್ತುವಾರಿ ಮಾಡಿದ್ದಾರೆ. ಅದರ ಆಧಾರದಲ್ಲಿ ಬೆಂಗಳೂರು ಉಸ್ತುವಾರಿ ಸಿಎಂ ಬಳಿ ಇರುವುದು ಸರಿ ಇದೆ. ಸಿಎಂ ಬೊಮ್ಮಾಯಿ ನಮಗಿಂತಲೂ ಬುದ್ಧಿವಂತರು.
ಬೆಂಗಳೂರಿಗೆ 6,000 ಕೋಟಿ ರೂ. ಅನುದಾನ ನೀಡಿದ್ದಾರೆ. ಹಾಗಾಗಿ, ಬೆಂಗಳೂರು ಉಸ್ತುವಾರಿ ಸಿಎಂ ಬೊಮ್ಮಾಯಿ ಉಳಿಸಿಕೊಂಡಿರುವ ಬಗ್ಗೆ ನಮ್ಮ ತಕರಾರು ಇಲ್ಲ ಎಂದು ತಿಳಿಸಿದರು.
ಜಾಹಿರಾತು : ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ