ಬೆಂಗಳೂರು: ರಾಜ್ಯದಲ್ಲಿ ಅಪ್ರಾಪ್ತ ವಯಸ್ಸಿನಲ್ಲೇ ಗರ್ಭ ಧರಿಸುತ್ತಿರುವ ಪ್ರಕರಣಗಳು ಹೆಚ್ಚಳವಾಗುತ್ತಿದೆ. 14 ರಿಂದ 17 ವರ್ಷದ ವರೆಗಿನ ಚಿಕ್ಕ ವಯಸ್ಸಿನ ಮಕ್ಕಳು ಗರ್ಭವತಿಯಾಗುತ್ತಿರುವುದು ಕಳವಳಕಾರಿಯಾಗಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಇಲಾಖೆ (ಆರ್ಸಿಹೆಚ್) ಮಾಹಿತಿ ಪ್ರಕಾರ, 2023 ರಲ್ಲಿ 28,657 ಬಾಲ ಗರ್ಭಿಣಿಯರು ಪತ್ತೆಯಾಗಿದ್ದಾರೆ.
ಆರ್ಸಿಹೆಚ್ ಮಾಹಿತಿ ಪ್ರಕಾರ, 2023ರಲ್ಲಿ ಬೆಂಗಳೂರು, ವಿಜಯಪುರ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಬಾಲ ಗರ್ಭಿಣಿಯರ ಸಂಖ್ಯೆ ಹೆಚ್ಚಿದೆ. ಬೆಂಗಳೂರಿನಲ್ಲಿ 2,815, ವಿಜಯಪುದಲ್ಲಿ 2,004 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 2,254 ಬಾಲ ಗರ್ಭಿಣಿಯರ ಪ್ರಕರಣಗಳು ಬೆಳಕಿಗೆ ಬಂದಿದೆ. ಉಡುಪಿ ಜಿಲ್ಲೆಯಲ್ಲಿ 56 ಪ್ರಕರಣಗಳು ದಾಖಲಾಗಿವೆ. ಇನ್ನು ಕೋಲಾರ ಜಿಲ್ಲೆಯಲ್ಲಿ ಎಂಟು ತಿಂಗಳಲ್ಲಿ ಅಂದರೆ 2023ರ ಏಪ್ರಿಲ್‌ನಿಂದ ನವೆಂಬರ್‌ವರೆಗೆ 98 ಅಪ್ರಾಪ್ತ ಬಾಲಕಿಯರು ಗರ್ಭ ಧರಿಸಿದ್ದಾರೆ ಎಂದು ವರದಿಯಾಗಿದೆ.
ರಾಜ್ಯದಲ್ಲಿ ಗ್ರಾಮದಿಂದ ರಾಜ್ಯಮಟ್ಟದವರೆಗೆ 59 ಸಾವಿರ ಬಾಲ್ಯ ವಿವಾಹ ನಿಷೇಧ ಅಧಿಕಾರಿಗಳು ಇದ್ದಾರೆ. ಬಾಲಕಿಯರು ಗರ್ಭಿಣಿಯಾಗುತ್ತಿರುವುದಕ್ಕೆ ಬಾಲ್ಯ ವಿವಾಹ, ಲೈಂಗಿಕ ದೌರ್ಜನ್ಯ, ಅಕ್ರಮ, ಕುತೂಹಲದ ದೈಹಿಕ ಸಂಪರ್ಕವೂ ಮುಖ್ಯ ಕಾರಣ ಎಂದು ಹೇಳಲಾಗುತ್ತಿದೆ. ಸರ್ಕಾರ, ಪೊಲೀಸ್, ಬಾಲ್ಯ ವಿವಾಹ ತಡೆಯುವ ಅಧಿಕಾರಿಗಳು, ಬಾಲ್ಯ ವಿವಾಹ ತಡೆ ಕಾವಲು ಸಮಿತಿ, ಬಾಲ ರಕ್ಷಣಾ ಸಮಿತಿ ಸೇರಿದಂತೆ ಇತರ ಸಂಘ ಸಂಸ್ಥೆಗಳು ಇದ್ದರೂ ಇದಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ಈ ಎಲ್ಲ ಅವ್ಯವಸ್ಥೆಗಳಿಗೆ ಬಲಿಪಶುಗಳಾವುದು ಬಡವರು, ಹಿಂದುಳಿದ ಸಮುದಾಯ, ಅದರಲ್ಲೂ ಹೆಣ್ಣು ಮಕ್ಕಳು. ಹೆಣ್ಣು ಮಕ್ಕಳೆಂದರೆ ಹೆತ್ತವರಿಗೂ, ಸಮಾಜಕ್ಕೂ ಭಾರ, ಹೊರೆ ಎಂಬ ಭಾವನೆ ಇದೆ. ಬಡತನ ಒಂದು ಕಾರಣವಾದರೆ, ಮನೆ ಮಗಳು ವಯಸ್ಸಿಗೆ ಬರುತ್ತಿದ್ದಂತೆ ಮದುವೆ ಮಾಡಿ ತಮ್ಮ ಜವಾಬ್ದಾರಿ ಕಡಿಮೆ ಮಾಡಿಕೊಳ್ಳುತ್ತಾರೆ. ಹೆಣ್ಣು ಮಕ್ಕಳಿಗೆ ಬೇಗ ಮದುವೆಯಾಗಬೇಕು, ಮಕ್ಕಳನ್ನು ಹೆರಬೇಕೆಂಬ ಧೋರಣೆ ಈಗಲೂ ಇದೆ. ಲೈಂಗಿಕ ಕ್ರಿಯೆ, ಗರ್ಭಧಾರಣೆ ಅಂದರೆ ಏನು? ಯಾವಾಗ ಗರ್ಭಿಣಿಯಾಗಬೇಕು? ಯಾವಾಗ ಹೆರಬೇಕು? ಅದಕ್ಕೆ ದೇಹ ತಯಾರಾಗಿದೆಯೇ ಎಂಬ ಅರಿವು ಬರುವ ಮುನ್ನವೇ ಬಾಲಕಿ ಗರ್ಭಿಣಿಯಾಗುತ್ತಾರೆ.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇದ್ದೂ ಇಷ್ಟೊಂದು ಪ್ರಮಾಣದಲ್ಲಿ ಮಕ್ಕಳ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ. ಬಾಲ್ಯ ವಿವಾಹಗಳಾಗುತ್ತಿವೆ. ಬಾಲಕಿಯರು ಗರ್ಭಿಣಿಯರಾಗುತ್ತಿದ್ದಾರೆ. ಪೋಕ್ಸೊ ಅಡಿ ಪ್ರಕರಣ ದಾಖಲಿಸುತ್ತಿಲ್ಲ. ಅಪ್ರಾಪ್ತೆ ಗರ್ಭಿಣಿಯಾದರೆ ಆರೋಗ್ಯ ಇಲಾಖೆ ಅಧಿಕಾರಿಗಳು ಪೊಲೀಸ್ ಠಾಣೆಗೆ ದೂರು ನೀಡಬೇಕು. ತಾಯಿ ಕಾರ್ಡ್ ಕೊಡುವಾಗಲಾದರೂ ಎಚ್ಚೆತ್ತುಕೊಳ್ಳಬೇಕು. ಆದರೆ, ಅದು ಸಾಧ್ಯವಾಗುತ್ತಿಲ್ಲ. ಹೀಗಾಗಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತಿಲ್ಲ. ಬಾಲ್ಯ ವಿವಾಹ ತಡೆಗೆ ಸಾಕಷ್ಟು ಜಾಗೃತಿ ಮೂಡಿಸಲಾಗುತ್ತಿದೆ. ಆದರೂ ಸಹ ನಿಯಂತ್ರಣಕ್ಕೆ ಬಂದಿಲ್ಲ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರು ಹೇಳುತ್ತಾರೆ.
ಪ್ರಮುಖವಾಗಿ ಶಾಲೆಗಳಲ್ಲಿ ಡ್ರಾಪೌಟ್ ಆದ ಮಕ್ಕಳು ಎಲ್ಲಿದ್ದಾರೆ ಎನ್ನುವುದು ಪತ್ತೆ ಹಚ್ಚಿದರೆ ಬಾಲ್ಯ ವಿವಾಹಕ್ಕೆ ತಕ್ಕ ಮಟ್ಟಿಗೆ ಬ್ರೇಕ್ ಹಾಕಬಹುದು. ಈ ನಿಟ್ಟಿನಲ್ಲಿ ಶಾಲಾ ಶಿಕ್ಷಕರ ಪಾತ್ರ ಪ್ರಮುಖ ಪಾತ್ರವಿದೆ ಎನ್ನುತ್ತಾರೆ ಅಧಿಕಾರಿಗಳು.
ಆಸ್ಪತ್ರೆಗಳಲ್ಲಿಯೇ ಹೆಣ್ಣು ಭ್ರೂಣ ಹತ್ಯೆ ವ್ಯಾಪಕವಾಗಿ ನಡೆಯುತ್ತಿರುವುದು ಇತ್ತೀಚೆಗೆ ಮಂಡ್ಯ, ಹೊಸಕೋಟೆ ಮತ್ತಿತರ ಕಡೆ ಬೆಳಕಿಗೆ ಬಂದಿವೆ. ಗರ್ಭಪಾತ ಮಾಡುವುದನ್ನೇ ದಂಧೆ ಮಾಡಿಕೊಂಡ ಕಿರಾತಕರು ನಡೆಸುತ್ತಿರುವ ಹೆಣ್ಣು ಭ್ರೂಣಗಳ ಮಾರಣಹೋಮ ಒಂದೆಡೆಯಾದರೆ, ಹೆರಿಗೆ ಆದ ನಂತರ ಮಗು ಹೆಣ್ಣಾದರೆ ಕಸದ ರಾಶಿ ಒಳಗೆ ಎಸೆಯುವ ಅಮಾನವೀಯ ಕೃತ್ಯಗಳಿಗೂ ಕಾಡಿವಾಣ ಹಾಕಬೇಕಿದೆ. ಇನ್ನು ಭ್ರೂಣ ಲಿಂಗಪತ್ತೆ ವಿರುದ್ಧ ಕಠಿಣ ಕಾನೂನು ಇದೆ. ಬಾಲ್ಯ ವಿವಾಹ ಸಹ ಶಿಕ್ಷಾರ್ಹ ಅಪರಾಧ. ಪೋಕ್ಸೋ ಅಡಿ ಪ್ರಕರಣಗಳು ಇವೆ. ಆದರೆ, ಈ ಕಾನೂನುಗಳು ಮತ್ತಷ್ಟು ಕಠಿಣವಾದಾಗ ಇದೆಕ್ಕೆಲ್ಲಾ ಕಡಿವಾಣ ಬೀಳಬಹುದು.
ಜಿಲ್ಲಾವಾರು ಬಾಲ ಗರ್ಭಿಣಿಯರ ಪ್ರಕರಣಗಳೆಷ್ಟು ? : ಬೆಂಗಳೂರು ನಗರ 2815, ಬೆಂಗಳೂರು ಗ್ರಾಮಾಂತರ 466, ಚಿಕ್ಕಬಳ್ಳಾಪುರ 567, ಕೋಲಾರ 869, ಮೈಸೂರು 1370, ಮಂಡ್ಯ 846, ರಾಮನಗರ 432, ತುಮಕೂರು 1375, ಉತ್ತರ ಕನ್ನಡ 184, ಉಡುಪಿ 56, ಶಿವಮೊಗ್ಗ 596, ಕೊಡಗು 270, ಹಾಸನ 859, ಹಾವೇರಿ 713, ಕಲಬುರಗಿ 1511, ವಿಜಯಪುರ 2004, ಕೊಪ್ಪಳ 571, ರಾಯಚೂರು 1252, ಯಾದಗಿರಿ 921, ಗದಗ 303, ಧಾರವಾಡ 489, ದಾವಣಗೆರೆ 857, ದಕ್ಷಿಣ ಕನ್ನಡ 135, ಚಿಕ್ಕಮಗಳೂರು 435, ಚಿತ್ರದುರ್ಗ 1412, ಬಾಗಲಕೋಟೆ 1193, ಬಳ್ಳಾರಿ 1896, ಬೆಳಗಾವಿ 2754, ಬೀದರ್ 1143.
ಇದನ್ನೂ ಓದಿ : ಚಿಕ್ಕಬಳ್ಳಾಪುರ: ಮಗುವಿಗೆ ಜನ್ಮ ನೀಡಿದ 14ರ ಬಾಲಕಿ