ಬೆಂಗಳೂರು: ವಿಧಾನಸೌಧ ಸಚಿವಾಲಯದ ಸೇವೆಗಳನ್ನೂ ಸಕಾಲ ಯೋಜನೆ ವ್ಯಾಪ್ತಿಗೆ ತರಲು ಮುಖ್ಯಮಂತ್ರಿ ಹಸಿರು ನಿಶಾನೆ ತೋರಿದ್ದಾರೆ ಎಂದು ಸಚಿವ ಸುರೇಶ್ ಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಈ ಬಗ್ಗೆ ಮಾತನಾಡಿದ ಅವರು, ವಿಧಾನಸೌಧ ಸಚಿವಾಲಯದ ಸೇವೆಗಳನ್ನು ಸಕಾಲದಡಿ ತರಲು ಕ್ರಮ ಕೈಗೊಳ್ಳುತ್ತೇವೆ. ಸಚಿವಾಲಯದಲ್ಲೂ ಹಲವು ಅರ್ಜಿಗಳು ವಿಲೇವಾರಿಯಾಗದೇ ಸಾರ್ವಜನಿಕರು ಕಾಯುತ್ತಿರುವ ಪ್ರಸಂಗಗಳು ಹೆಚ್ಚಿವೆ. ಹೀಗಾಗಿ ಸಚಿವಾಲಯದ ಸೇವೆಗಳನ್ನೂ ಸಕಾಲಕ್ಕೆ ತರಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಸಕಾಲ ಯೋಜನೆಯ ಕಾರ್ಯಪಾಲನಾ ವರದಿ ಬಿಡುಗಡೆ ಮಾಡಿದ ಅವರು, ಇದುವರೆಗೆ ಸಕಾಲ ಯೋಜನೆಯಡಿ 20,45,31,702 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. ಅಕ್ಟೋಬರ್ನಲ್ಲಿ ಚಿಕ್ಕಬಳ್ಳಾಪುರ, ನವೆಂಬರ್ನಲ್ಲಿ ಯಾದಗಿರಿ ಜಿಲ್ಲೆ ಅತ್ಯುತ್ತುಮ ಸಾಧನೆ ಮಾಡಿವೆ. ಬೆಂಗಳೂರು ನಗರ ಜಿಲ್ಲೆ ಅತ್ಯಂತ ಕಳಪೆ ಸಾಧನೆ ಮಾಡಿದೆ. ಅದರಲ್ಲೂ ಬಿಬಿಎಂಪಿ ತೀರಾ ಹಿಂದುಳಿದಿದೆ. ಹಾಗಾಗಿ ಬಿಬಿಎಂಪಿಯ ಬಗ್ಗೆ ಪ್ರತ್ಯೇಕ ಪ್ರಗತಿ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.
ಬೀದರ್ ಜಿಲ್ಲೆ ಹಾಗೂ ಕರ್ನಾಟಕ ಕಟ್ಟಡ ನಿರ್ಮಾಣ ಕಾರ್ಮಿಕರ ಮಂಡಳಿ, ಕೆಐಡಿಬಿ, ಐಟಿ-ಬಿಟಿ ಇಲಾಖೆಗಳ ಅತಿ ಹೆಚ್ಚು ಸಕಾಲ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಸಕಾಲ ಅರ್ಜಿಗಳನ್ನು ತಿರಸ್ಕರಿಸಿರುವುದಕ್ಕೆ ಕಾರಣಗಳನ್ನು ಪತ್ತೆ ಹಚ್ಚಲು ಶೀಘ್ರದಲ್ಲೇ ಇಲಾಖಾವಾರು ಪ್ರಗತಿ ಪರಿಶೀಲನೆ ನಡೆಸುತ್ತೇವೆ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು. ಕಂದಾಯ ಇಲಾಖೆ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಇಲಾಖೆಯಿಂದ ಹೆಚ್ಚು ಅರ್ಜಿಗಳು ಸ್ವೀಕರಿಸಲಾಗಿದೆ. ಸಕಾಲ ಯೋಜನೆ ವ್ಯಾಪ್ತಿಗೆ ಬರುವ ಒಟ್ಟು 91 ಇಲಾಖೆಗಳ 1033 ಸೇವೆಗಳ ಪೈಕಿ ಅಕ್ಟೋಬರ್ನಲ್ಲಿ 14,307 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದಿದ್ದರೆ, ನವೆಂಬರ್ ತಿಂಗಳಲ್ಲಿ 20,601 ಅರ್ಜಿಗಳು ಅವಧಿ ಮೀರಿ ಬಾಕಿ ಉಳಿದುಕೊಂಡಿದೆ ಎಂದು ತಿಳಿಸಿದರು. ತೋಟಗಾರಿಕಾ ಇಲಾಖೆಯ 202 ಕಚೇರಿಗಳಿಗೆ ಇದುವರೆಗೆ ಒಂದೇ ಒಂದು ಸಕಾಲ ಅರ್ಜಿ ಬಂದಿಲ್ಲ. ಅದೇ ರೀತಿ ಇಂಧನ ಇಲಾಖೆಯ ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿಯ 330 ಕಚೇರಿಗಳಿಗೆ ಒಂದೇ ಒಂದು ಸಕಾಲ ಅರ್ಜಿ ಬಂದಿಲ್ಲ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ 37 ಕಚೇರಿಗಳಿಗೆ, ಬೆಂಗಳೂರು ನಗರ ಜಿಲ್ಲೆಯ 824 ಕಚೇರಿಗಳಲ್ಲೂ ಒಂದೇ ಒಂದು ಸಕಾಲ ಅರ್ಜಿ ಸ್ವೀಕರಿಸಲಾಗಿಲ್ಲ ಎಂದು ಮಾಹಿತಿ ನೀಡಿದರು.