ಬೆಂಗಳೂರು: ಕೊರೊನಾ ವೈರಸ್‌ನ ಹೊಸ ಪ್ರಭೇದ ಒಮಿಕ್ರೋನ್ ಭೀತಿ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಲಾಗಿರುವ ಬೆಳಗಾವಿ ವಿಧಾನ ಮಂಡಲ ಅಧಿವೇಶವನ್ನು ರದ್ದುಪಡಿಸುವಂತೆ ಸಚಿವಾಲಯ ನೌಕರರ ಸಂಘ ಮನವಿ ಮಾಡಿದೆ.
ಈ ಸಂಬಂಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಪತ್ರ ಮುಖೇನ ಸಂಘ ಮನವಿ ಮಾಡಿದೆ. ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ ಡಿಸೆಂಬರ್ 13ರಿಂದ ವಿಧಾನ ಮಂಡಲದ ಅಧಿವೇಶವನ್ನು ನಡೆಸಲು ಉದ್ದೇಶಿಸಿರುವುದು ಸ್ವಾಗತಾರ್ಹವಾದರೂ ವಿಶ್ವದಾದ್ಯಂತ ಒಮಿಕ್ರೋನ್ ವೈರಸ್ ಹರಡುವ ಭೀತಿ ಎದುರಾಗಿದೆ.
ವೈರಸ್ಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇತ್ತೀಚೆಗೆ ಸಿಎಂ ಬಸವರಾಜ ಬೊಮ್ಮಾಯಿ ನಡೆಸಿದ ಸಭೆಯಲ್ಲಿ ತಜ್ಞರು ರಾಜ್ಯದಲ್ಲಿ ಹೆಚ್ಚಿನ ಮಟ್ಟದಲ್ಲಿ ಎಚ್ಚರಿಕೆ ಹಾಗೂ ಕಟ್ಟುನಿಟ್ಟಿನ ಬಿಗಿ ಕ್ರಮಗಳನ್ನು ಜಾರಿಗೊಳಿಸುವಂತೆ ಶಿಫಾರಸು ಮಾಡಿದ್ದಾರೆ ಎಂದು ಸಭಾಧ್ಯಕ್ಷರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.
ಬೆಳಗಾವಿಯು ಗಡಿ ಜಿಲ್ಲೆಯಾಗಿದ್ದು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಕ್ಕೆ ಹೊಂದಿಕೊಂಡಿವುದರಿಂದ ಅಂತಾರಾಜ್ಯ ಹಾಗೂ ವಿದೇಶದಿಂದ ಆಗಮಿಸುವವರ ಸಂಚಾರ ಹೆಚ್ಚಾಗಿರುವ ಜಿಲ್ಲೆಯೂ ಆಗಿದೆ. ಅಧಿವೇಶನದ ಕಾರಣದಿಂದ ಸಾವಿರಾರು ಜನ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ, ರಾಜಕಾರಣಿಗಳು ಒಂದೇ ಕಡೆ ಸೇರುವುದರಿಂದ ವೈರಸ್ ಹರಡುವ ಭೀತಿ ಹೆಚ್ಚಾಗಿರುತ್ತದೆ.
ಹೀಗಾಗಿ, ಈ ಬಗ್ಗೆ ಮತ್ತೊಮ್ಮೆ ಪರಿಶೀಲಿಸಿ, ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 13ರಿಂದ ನಡೆಸಲು ಉದ್ದೇಶಿಸಿರುವ ವಿಧಾನ ಮಂಡಲ ಅಧಿವೇಶನವನ್ನು ರದ್ದುಗೊಳಿಸುವಂತೆ ಸಂಘದ ಅಧ್ಯಕ್ಷ ಗುರುಸ್ವಾಮಿ ಪತ್ರದಲ್ಲಿ ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಹತ್ಯೆಗೆ ಸಂಚು ಆರೋಪ : ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ವಿರುದ್ಧ ಶಾಸಕ ಎಸ್ ಆರ್ ವಿಶ್ವನಾಥ್ ದೂರು