ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಖಾಸಗಿ ಶಿಕ್ಷಣ ಸಂಸ್ಥೆಗಳು ಇಂದು ಬೃಹತ್ ಪ್ರತಿಭಟನೆ ನಡೆಸಿದ್ವು. ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣದಿಂದ ರ್ಯಾಲಿ ಮೂಲಕ ಫ್ರೀಡಂ ಪಾರ್ಕ್ ತಲುಪಿ ಸಮಾವೇಶ ನಡೆಸಿದರು. ಇತ್ತ ಖಾಸಗಿ ಶಿಕ್ಷಣ ಸಂಸ್ಥೆಗಳ ಪ್ರತಿಭಟನಾ ಸ್ಥಳಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದರು.
ಈ ವೇಳೆ ಮಾತಾನಾಡಿದ ಸಚಿವ ಸುರೇಶ್ ಕುಮಾರ್, ಖಾಸಗಿ ಶಿಕ್ಷಕರ ನೋವು-ಕಷ್ಟದ ಬಗ್ಗೆ ಅರಿವಿದೆ. ನರೇಗಾ ಅಡಿ ಕೂಲಿ ಕೆಲಸ ಮಾಡಿದವರನ್ನ, ತರಕಾರಿ ಕೆಲಸ ಮಾಡಿದ್ದು ನೋಡಿದ್ದೇನೆ. ಪೋಷಕರು ಸಹ ಆರ್ಥಿಕ ಸಂಕಷ್ಟ ಅನುಭವಿಸಿದ್ದಾರೆ. ಇದಕ್ಕೆ ಕಾರಣ ಕೋವಿಡ್ ವೈರಸ್. ನಾವೆಲ್ಲ ಕೋವಿಡ್ಅನ್ನು ದೂಷಿಸಬೇಕು ಎಂದರು.
ಈ ವರ್ಷ 10-15% ಮಕ್ಕಳು ಶಾಲೆಗೆ ದಾಖಲಾಗಿಲ್ಲ. ಶಾಲೆಗಳೂ ನಡೀಬೇಕು, ಪೋಷಕರೂ ಬದುಕಬೇಕು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಪೋಷಕರೂ ತಮ್ಮ ಸಮಸ್ಯೆಗಳನ್ನು ಹೇಳಿದ್ದಾರೆ. ಅನೇಕ ಶಾಲೆಗಳು ಫೀಸ್ ಕಟ್ಟಿಸಿಕೊಳ್ತಿಲ್ಲ. ಕೊನೆಗೆ ಇದು ಶಾಲೆ ಮತ್ತು ಪೋಷಕರ ನಡುವಿನ ನಂಬಿಕೆ ಪ್ರಶ್ನೆಯಾಗಿದೆ. ಪೋಷಕರು ಮತ್ತು ಖಾಸಗಿ ಶಾಲೆಗಳ ನಡುವಿನ ಸಂಘರ್ಷದಲ್ಲಿ ಮಕ್ಕಳು ಬಡವಾಗ್ತಿದ್ದಾರೆ. ಹೀಗಾಗಿ, ಮತ್ತೊಮ್ಮೆ ಎಲ್ಲಾ ಸಂಘಟನೆಗಳ ಪ್ರಮುಖರನ್ನ ಕರೆದು, ಪೋಷಕರನ್ನೂ ಕರೆದು ಮತ್ತೊಮ್ಮೆ ವಿಚಾರ ಮಾಡ್ತೀನಿ ಎಂದರು.
ಖಾಸಗಿ ಶಾಲೆಗಳ ಶಿಕ್ಷಕರು ಮತ್ತು ಸಿಬ್ಬಂದಿಗೆ ಪ್ಯಾಕೇಜ್ ಕೊಡುವ ಸಂಬಂಧ ಬೇಡಿಕೆ ಇಟ್ಟಿದ್ದೀರಾ. ಹಣಕಾಸು ಇಲಾಖೆ ಜೊತೆ, ಸರ್ಕಾರಿ ನೌಕರರ ಜೊತೆ ಮಾತನಾಡಿದ್ದೇನೆ. ಬೇರೆ ಬೇರೆ ಪ್ರಯತ್ನ ಮಾಡಿದ್ದೇನೆ. ಫುಡ್ ಕಿಟ್ ಕೊಡೋಕೆ ಪುಟ್ಟಣ್ಣ ಜೊತೆ ಕಾರ್ಮಿಕ ಸಚಿವರ ಜೊತೆಗೆ ಕೂಡ ಚರ್ಚೆ ಮಾಡಿದ್ದೇನೆ. ಮತ್ತೊಮ್ಮೆ ಸಿಎಂ ಜೊತೆ ಸಭೆ ನಡೆಸಿ ಖಾಸಗಿ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಹಾಯ ಮಾಡಲು ಪ್ರಯತ್ನ ನಡೆಸ್ತೀನಿ ಎಂದು ಹೇಳಿದರು.
1 ರಿಂದ 5ನೇ ತರಗತಿ ಆರಂಭಕ್ಕೆ ಒತ್ತಾಯ
ಪಂಜಾಬ್ ಹೊರತುಪಡಿಸಿದ್ರೆ ನಮ್ಮ ರಾಜ್ಯದಲ್ಲೇ 6ನೇ ತರಗತಿಯಿಂದ 12ನೇ ತರಗತಿಗಳು ಆರಂಭವಾಗಿವೆ. ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಕೊಡುವ ಸಲಹೆಗಳಿಂದಲೇ ಯಶಸ್ವಿಯಾಗಿ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸಿದ್ದೇವೆ. ಈ ವಾರ ಅವರೊಂದಿಗೆ ಸಭೆ ಇದ್ದು, ಎರಡನೇ ಅಲೆಯ ಭಯ ಶುರುವಾಗಿದೆ. ನೆರೆಯ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಸಾವಿರಾರು ಕೇಸ್ಗಳು ಬರ್ತಿವೆ. ಎಲ್ಲಾ ತರಗತಿಗಳು ಪೂರ್ಣವಾಗಿ ನಡೆಯಬೇಕು ಎಂದು ಮೊದಲು ಮಾತನಾಡಿದ್ದು ನಾನು. ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಿ ಒಂದನೇ ತರಗತಿಯಿಂದ ಕ್ಲಾಸ್ ಶುರು ಮಾಡುವ ಬಗ್ಗೆ ಸಭೆ ನಡೆಸುತ್ತೇವೆ ಎಂದರು.