ಬೆಂಗಳೂರು: 2019-20ನೇ ಸಾಲಿನ ಶೈಕ್ಷಣಿಕ ವರ್ಷದಿಂದ 7ನೇ ತರಗತಿ ವಿದ್ಯಾರ್ಥಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವ ಕುರಿತು ಸಾಕಷ್ಟು ಗೊಂದಲವಿತ್ತು. ಜೊತೆಗೆ ಹಲವು ಸಂಘಟನೆಗಳಿಂದ ಪಬ್ಲಿಕ್ ಪರೀಕ್ಷೆಗೆ ವಿರೋಧವೂ ವ್ಯಕ್ತವಾಗಿತ್ತು. ಆರ್ಟಿಇ(ಶಿಕ್ಷಣದ ಹಕ್ಕು) ಕಾರ್ಯಕರ್ತರು ಕೂಡ ಈ ರೀತಿಯ ಪರೀಕ್ಷೆ ನಡೆಸದಂತೆ ಪ್ರತಿಭಟನೆ ನಡೆಸಿದ್ದರು.
ಈ ವಿಚಾರಕ್ಕೆ ಸ್ಪಷ್ಟನೆ ನೀಡಿರುವ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್, ಪಬ್ಲಿಕ್ ಪರೀಕ್ಷೆ ನಡೆಸುವ ಬದಲು, ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ರು. 7ನೇ ತರಗತಿ ಮಕ್ಕಳಿಗೆ ಪಬ್ಲಿಕ್ ಪರೀಕ್ಷೆ ಅಗತ್ಯತೆ ಕುರಿತು ವಿವರವಾದ ಚರ್ಚೆ ನಡೆಸಲಾಗಿದೆ. ಹಲವಾರು ಸುತ್ತಿನ ಮಾತುಕತೆಯೂ ನಡೆದಿದೆ. ಈ ಹಿನ್ನೆಲೆಯಲ್ಲಿ ಪಬ್ಲಿಕ್ ಪರೀಕ್ಷೆಗೆ ಬದಲು ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಪರೀಕ್ಷೆಯಲ್ಲಿ ಯಾವುದೇ ಮಕ್ಕಳನ್ನು ಅನುತ್ತೀರ್ಣ ಮಾಡುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.
ಈ ಪರೀಕ್ಷೆಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಜವಾಬ್ದಾರಿಯನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ (ಎಸ್ಎಸ್ಎಲ್ಸಿ ಬೋರ್ಡ್) ವಹಿಸಲಾಗಿದೆ. ಇನ್ನು ಮೌಲ್ಯಮಾಪನವನ್ನು ಆಯಾ ಡಿಡಿಪಿಐಗಳ ಮೂಲಕ ಬೇರೆ ಶಿಕ್ಷಕರೊಂದಿಗೆ ಅಂದರೆ, ಸರ್ಕಾರಿ-ಖಾಸಗಿ ಶಿಕ್ಷಕರಿಂದ ಮೌಲ್ಯಮಾಪನ ಮಾಡಲಾಗುವುದು. ಜೊತೆಗೆ ಮಾರ್ಚ್ನಲ್ಲಿ ಪರೀಕ್ಷೆ ನಡೆಯಲಿದೆ ಎಂದು ವಿವರವಾಗಿ ಮಾಹಿತಿ ಕೊಟ್ಟರು.
ಪಬ್ಲಿಕ್ ಪರೀಕ್ಷೆ ಎಂಬ ಪದ ವಿದ್ಯಾರ್ಥಿಗಳು ಹಾಗು ಪೋಷಕರಲ್ಲಿ ಭಯ ಹುಟ್ಟಿಸಿದೆ. ಹೀಗಾಗಿ ಶಾಲೆಯಲ್ಲಿ ಗಂಭೀರ ಸ್ವರೂಪದ ಶಿಕ್ಷಣವನ್ನು ಬೆಳೆಸುವ ನಿಟ್ಟಿನಲ್ಲಿ ಸಾಮಾನ್ಯ ಮೌಲ್ಯಾಂಕನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ತಿಳಿಸಿದರು.