ಬೆಂಗಳೂರು: ಎಸ್ಎಸ್ಎಲ್ಸಿ ಪರೀಕ್ಷೆ ದಿನಾಂಕ ಪ್ರಕಟಣೆ ಮತ್ತು ಪ್ರಾಥಮಿಕ ಶಾಲೆಗಳನ್ನು ಆರಂಭಿಸುವ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳಲು ಪ್ರಾಥಮಿಕ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದ್ದಾರೆ. ವಿಕಾಸಸೌಧದ ಸಚಿವರ ಕೊಠಡಿಯಲ್ಲಿ ಸಭೆ ಆರಂಭವಾಗಿದ್ದು, ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಣ ತಜ್ಞರು ಮತ್ತು ಎಲ್ಲ ಜಿಲ್ಲೆಯ ಜಿಲ್ಲಾಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
ಸಭೆಯಲ್ಲಿ ಅತ್ಯಂತ ಪ್ರಮುಖವಾಗಿರುವ ಮೂರು ವಿಚಾರಗಳ ಕುರಿತು ಚರ್ಚೆ ನಡೆಯಲಿದೆ. ಪ್ರಾಥಮಿಕ ಶಾಲೆಗಳ ಆರಂಭ, ಎಸ್ಎಸ್ಎಲ್ಸಿ ಪರೀಕ್ಷಾ ದಿನಾಂಕ ಹಾಗು ದ್ವಿತೀಯ ಪಿಯು ಫಲಿತಾಂಶ ಪ್ರಕಟ ದಿನಾಂಕಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಸಭೆ ಬಳಿಕ ಶಾಲೆ ಆರಂಭ, ಎಸ್ಎಸ್ಎಲ್ಸಿ ಎಕ್ಸಾಂ ವೇಳಾಪಟ್ಟಿಯನ್ನು ಸಚಿವ ಸುರೇಶ್ ಕುಮಾರ್ ಬಿಡುಗಡೆ ಮಾಡಲಿದ್ದಾರೆ.
ಶಾಲಾರಂಭಕ್ಕೆ ಶುರುವಾಯ್ತು ಕೌಂಟ್ಡೌನ್! : ಆರೋಗ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿದ್ರೆ ರಾಜ್ಯದಲ್ಲಿ ಶಾಲೆ ಆರಂಭ ಆಗಲಿದೆ. ಆರೋಗ್ಯ ಇಲಾಖೆ ಸೂಚನೆ ನೀಡಿದ್ರೆ ಜೂಲೈ ಮೊದಲ ಅಥವಾ ಎರಡನೇ ವಾರದಲ್ಲಿಯೇ ಶಾಲೆ ಆರಂಭ ಮಾಡಲು ಶಿಕ್ಷಣ ಇಲಾಖೆ ಸಿದ್ಧತೆ ನಡೆಸಿದೆ. ಕೊರೊನಾ ಪ್ರಕರಣಗಳು ಇಳಿಕೆ ಕಂಡಿರುವ ಜಿಲ್ಲೆಯಲ್ಲಿ ಶಾಲೆ ಆರಂಭ ಬಹುತೇಕ ಪಕ್ಕಾ ಆಗಿದೆ.
ಸೋಂಕು ಮೂರಕ್ಕಿಂತ ಕಮ್ಮಿ ಇರುವ ಕಡೆ ಸರ್ಕಾರಿ ಶಾಲೆ ಆರಂಭ ಸಾಧ್ಯತೆ ಇದೆ. ಪಾಸಿಟಿವಿಟಿ ದರದ ಅನ್ವಯ ಶಾಲಾ ತರಗತಿ ತೆರೆಯಲು ಇಲಾಖೆ ಸಿದ್ಧತೆ ನಡೆಸಿದೆ. ತಾಲೂಕು, ಗ್ರಾಮಪಂಚಾಯ್ತಿ, ಗ್ರಾಮೀಣ ಪ್ರದೇಶ, ನಗರ ಪ್ರದೇಶ, ಹೋಬಳಿ, ತಾಲೂಕು ಕೇಂದ್ರವಾರು ತರಗತಿ ಆರಂಭಕ್ಕೆ ಯುವಜನ ರೂಪಿಸಲಾಗಿದೆ. ರಾಜ್ಯದಲ್ಲಿ ಭೌತಿಕವಾಗಿ ಶಾಲೆಗಳನ್ನು ತೆರೆಯಲು ತಜ್ಞರ ಸಲಹೆ ಪಡೆಯಲಾಗುತ್ತಿದೆ.
ಸಭೆಯಲ್ಲಿ ಶಿಕ್ಷಣ ಸಚಿವ, SSLC ಬೋರ್ಡ್ ನಿರ್ದೇಶಕಿ ಸುಮಂಗಳ, ಸಾರ್ವಜನಿಕ ಶಿಕ್ಷಣ ಇಲಾಖೆ ಅನ್ಬುಕುಮಾರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ. ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು, ಜಿಲ್ಲಾಧಿಕಾರಿಗಳು, ಎಸ್ಪಿ ವಿಡಿಯೋ ಸಂವಾದಲ್ಲಿ ಭಾಗಿಯಾಗಿದ್ದಾರೆ. ಸಭೆ ಬಳಿಕ 1 ಗಂಟೆಗೆ ಸುದ್ದಿಗೋಷ್ಟಿ ನಡೆಯಲಿರುವ ಶಿಕ್ಷಣ ಸಚಿವ ದ್ವಿತೀಯ ಪಿಯುಸಿ ಫಲಿತಾಂಶ ದಿನಾಂಕ ಕೂಡ ಪ್ರಕಟ ಮಾಡಲಿದ್ದಾರೆ.