ಬೆಂಗಳೂರು: ಆರ್ಆರ್ ನಗರ ಕ್ಷೇತ್ರದಲ್ಲಿ ಈಗಾಗಲೇ ಮುನಿರತ್ನ ಗೆದ್ದಾಗಿದೆ, ಇಲ್ಲಿ ಎರಡು ಹಾಗೂ ಮೂರನೇ ಸ್ಥಾನಕ್ಕೆ ಮಾತ್ರ ಚುನಾವಣೆ ನಡೆಯುತ್ತಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದ್ದಾರೆ.
ಆರ್ಆರ್ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಸಂದರ್ಭದಲ್ಲಿ ಇಲ್ಲಿ ಮುನಿರತ್ನ ಮನೆ ಮಗನಾಗಿ ಕೆಲಸ ಮಾಡಿದ್ದಾರೆ. ಇಲ್ಲಿ ಆಗ ಯಾರು ಬಂದಿದ್ರು? ನವೆಂಬರ್ 3ರ ನಂತರ ಆರ್ಆರ್ ನಗರದಲ್ಲಿ ಯಾರು ಇರ್ತಾರೆ? ಚುನಾವಣೆ ಇದ್ದಾಗ ಕೆಲವರು ಇಲ್ಲಿಗೆ ಬರ್ತಾರೆ ಬಳಿಕ ಇಲ್ಲಿ ಇರೋದು ಮುನಿರತ್ನ ಮಾತ್ರ. ಬೇರೆ ಯಾರು ಇರ್ತಾರೆ ಇಲ್ಲಿ ಎಂದು ಡಿಕೆ ಬ್ರದರ್ಸ್ಗೆ ಟಾಂಗ್ ನೀಡಿದರು.
ಯಾರು ಜಾತಿ ವಿಷಯ ಇಟ್ಟು ಮಾತಾಡ್ತಾರೆ ಅವರು ಅಸಹಾಯಕರು. ನಾನು, ಗೋಪಾಲಯ್ಯ ನಾವೆಲ್ಲಾ ಒಕ್ಕಲಿಗರಲ್ಲವಾ? ನಮ್ಮನ್ನೇ ಸರಿಯಾಗಿ ನೋಡಿಕೊಳ್ಳಲು ಆಗಲಿಲ್ಲ ಇನ್ನು ಇವರು ರಾಜ್ಯದಲ್ಲಿರುವ ಒಕ್ಕಲಿಗರನ್ನು ನೋಡ್ತಾರಾ.? ನಮ್ಮನ್ನು ಸರಿಯಾಗಿ ನೋಡಿಕೊಂಡಿದ್ದರೆ ನಾವು ಯಾಕೆ ಇಲ್ಲಿಗೆ ಬರ್ತಾ ಇದ್ವಿ.? ನಮ್ಮನ್ನೇ ಚೆನ್ನಾಗಿ ನೋಡಿಕೊಂಡಿದ್ದರೆ ನಾವು ಇಲ್ಲಿಗೆ ಬರ್ತಾ ಇದ್ವಾ.? ಎಂದು ಡಿ.ಕೆ. ಶಿವಕುಮಾರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.
ಕಳೆದ ಒಂದು ವಾರದಿಂದ ನಾನು ಕಾಂಗ್ರೆಸ್ ನಾಯಕರ ಹೇಳಿಕೆ ನೋಡಿದ್ದೇನೆ. ಧಮ್ ಬಗ್ಗೆ ಮಾತಾಡ್ತಾರೆ. ಆದರೆ ಒಬ್ಬ ಆಡಳಿತಗಾರನಿಗೆ ಬೇಕಿರೋದು ಧಮ್ ಅಲ್ಲ ದೂರದೃಷ್ಟಿ ಎಂದು ಸಿದ್ದರಾಮಯ್ಯಗೆ ಸುಧಾಕರ್ ಟಾಂಗ್ ನೀಡಿದರು.