ಬೆಂಗಳೂರು: ರಾಜ್ಯದಲ್ಲಿ ಪಟಾಕಿ ನಿಷೇಧದ ಕುರಿತು ಮುಖ್ಯಮಂತ್ರಿಗಳು ತೆಗೆದುಕೊಂಡಿರುವ ನಿರ್ಧಾರವನ್ನು ಸ್ವಾಗತಿಸುವುದಾಗಿ ಹೇಳಿದ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್, ಪಟಾಕಿ ನಿಷೇಧ ಕುರಿತ ರೂಪುರೇಷೆಗಳನ್ನು ನಾಳೆ ಅಂತಿಮಗೊಳಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಪಟಾಕಿ ನಿಷೇಧದ ಬಗ್ಗೆ ಸಿಎಂ ಘೋಷಿಸಿದ್ದಾರೆ. ಈ ಬಾರಿ ಸರಳ ದೀಪಾವಳಿ ಮಾಡಿ ಅಂತ ಸಿಎಂ ಹೇಳಿದ್ದಾರೆ. ಹಾಗಾಗಿ ಈ ವರ್ಷ ಯಾರೂ ಪಟಾಕಿ ಸಿಡಿಸಬೇಡಿ ಎಂದು ರಾಜ್ಯದ ಜನತೆಗೆ ಮನವಿ ಮಾಡಿಕೊಂಡರು.
ಕೋವಿಡ್ ಇರುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುವ ಕಾರಣ ಪಟಾಕಿ ನಿಷೇಧದ ಕುರಿತು ಆರೋಗ್ಯ ಇಲಾಖೆಯ ತಾಂತ್ರಿಕ ಸಮಿತಿಯಿಂದ ವರದಿ ಕೊಡಲಾಗಿತ್ತು. ಈ ವರದಿಯ ಹಿನ್ನೆಲೆಯಲ್ಲಿ ಪಟಾಕಿ ನಿಷೇಧಿಸಲಾಗಿದೆ ಎಂದರು.
ನಿಯಮ: ಕದ್ದುಮುಚ್ಚಿ ಪಟಾಕಿ ಸಿಡಿಸುವುದನ್ನು ತಡೆಯಲು ನಿಯಮ ರೂಪಿಸುತ್ತೇವೆ. ಕದ್ದುಮುಚ್ಚಿ ಪಟಾಕಿ ಸಿಡಿಸಿದರೆ ಯಾವ ರೀತಿ ನಿಗಾ ವಹಿಸಬೇಕು ಮತ್ತು ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕೆಂಬುದರ ಬಗ್ಗೆ ನಾಳೆ ನಿರ್ಧರಿಸುತ್ತೇವೆ ಎಂದು ತಿಳಿಸಿದರು. ಪಟಾಕಿ ನಿಷೇಧದ ರೂಪುರೇಷೆಗಳನ್ನು ನಾಳೆ ಅಂತಿಮಗೊಳಿಸಿ ಪ್ರಕಟಿಸಲಾಗಯವುದು. ಪಟಾಕಿ ನಿಷೇಧಕ್ಕೆ ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.