ಬೆಂಗಳೂರು: ಕೊರೊನಾ ವೈರಸ್ ತಪಾಸಣೆಯನ್ನು ಇಂದಿನಿಂದ ಎ, ಬಿ, ಸಿ ಎಂದು ವಿಂಗಡಣೆ ಮಾಡಿದ್ದೇವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ವಿದೇಶದಿಂದ ಮರಳುವವರನ್ನು ಮೂರು ವರ್ಗವಾಗಿ ವಿಂಗಡಿಸಲಾಗಿದೆ. ಸೋಂಕಿನ ಶಂಕೆ ಕಂಡು ಬಂದವರನ್ನು ಎ-ವರ್ಗ, ಡಯಾಬಿಟಿಕ್, ವೃದ್ಧರು, ಅಸ್ತಮಾ ಇರುವವರನ್ನು ಬಿ-ವರ್ಗ ಹಾಗೂ ರೋಗದ ಲಕ್ಷಣ ಕಂಡುಬರದವರನ್ನು ಸಿ-ವರ್ಗವಾಗಿ ವಿಂಗಡಿಸಲಾಗುತ್ತಿದೆ ಎಂದು ತಿಳಿಸಿದ್ರು.
ರಾಜ್ಯದಲ್ಲಿ ಇಲ್ಲಿಯವರೆಗೆ 1,09,132 ಜನರನ್ನು ತಪಾಸಣೆ ಮಾಡಲಾಗಿದೆ. ಇಂದು ಒಂದೇ ದಿನದಲ್ಲಿ 92 ಜನರ ರಕ್ತದ ಪರೀಕ್ಷೆ ಮಾಡಿಸಿದ್ದೇವೆ. ಇಂದು ಬಂದ ರಕ್ತ ಪರೀಕ್ಷೆ ವರದಿಯಲ್ಲಿ ಯಾವುದೇ ಪಾಸಿಟಿವ್ ಫಲಿತಾಂಶ ಬಂದಿಲ್ಲ. ಇಲ್ಲಿವರೆಗೆ 591 ಜನರ ಟೆಸ್ಟ್ ನೆಗೆಟಿವ್ ಬಂದಿದೆ. ಇಂದು 50 ಜನರ ಟೆಸ್ಟ್ ನೆಗೆಟಿವ್ ಬಂದಿದೆ ಎಂದು ವಿವರಿಸಿದರು. 11 ಜನರನ್ನು ಪ್ರತ್ಯೇಕವಾಗಿ ಆಸ್ಪತ್ರೆಗಳಲ್ಲಿ ಇರಿಸಿದ್ದೇವೆ. ಆರು ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿದ್ದರೆ, ಇದನ್ನು ಹೊರತುಪಡಿಸಿ ಬೇರೆ ಯಾರಲ್ಲೂ ಪಾಸಿಟಿವ್ ಪ್ರಕರಣ ಬಂದಿಲ್ಲ ಎಂದರು.
ಪತ್ರಕರ್ತರ ಮೇಲೆ ನಿಗಾ:
ಕಲಬುರಗಿ ಸಿದ್ದಿಕಿ ಸೋಂಕಿನಿಂದ ಸಾವು ಪ್ರಕರಣ ಸಂಬಂಧ ಪತ್ರಕರ್ತರ ಮೇಲೆ ನಿಗಾ ಇರಿಸಲಾಗಿದೆ.
ಅವರು ಕಲಬುರ್ಗಿಯಲ್ಲಿ ಮೊದಲು ಟ್ರೀಟ್ ಮೆಂಟ್ ತೆಗೆದುಕೊಂಡಿಲ್ಲ. ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ತೆಗೆದುಕೊಂಡಿದ್ದಾರೆ. ಸೋಂಕಿರುವ ಬಗ್ಗೆ ಅವರ ಕುಟುಂಬದವರೇ ಮುಚ್ಚಿಟ್ಟಿದ್ದಾರೆ. ನಾಲ್ಕು ದಿನಗಳ ಕಾಲ ಅವರು ಪ್ರತ್ಯೇಕವಾಗಿ ವೈದ್ಯರಿಂದ ಚಿಕಿತ್ಸೆ ಪಡೆದಿದ್ದಾರೆ. ಅವರಿಗೆ ವೈದ್ಯರು ಚಿಕಿತ್ಸೆ ಕೊಟ್ಟಿಲ್ಲ ಅನ್ನುವುದು ಸರಿಯಲ್ಲ. ಅವರೇ ಬೇರೆ ಬೇರೆ ಕಡೆ ಕರೆದೊಯ್ದಿದ್ದಾರೆ ಎಂದು ವಿವರಿಸಿದರು. ಇದೊಂದು ಕೇಸ್ ಸಾಕಷ್ಟು ಸೋಂಕಿಗೆ ಕಾರಣವಾಗಿರಬಹುದು. ಅಲ್ಲಿರುವ ಮಾಧ್ಯಮದವರನ್ನು ಪರೀಕ್ಷೆಗೊಳಪಡಿಸಬೇಕಿದೆ. ಇದನ್ನು ಅಲ್ಲಿನ ಜಿಲ್ಲಾಧಿಕಾರಿ ನಮ್ಮ ಗಮನಕ್ಕೆ ತಂದಿದ್ದಾರೆ. ಮಾಧ್ಯಮದವರು ಕೆಲವು ಶಂಕಿತರನ್ನು ಭೇಟಿ ಮಾಡಿದ್ದಾರೆ. ಹತ್ತಿರದಿಂದ ಅವರನ್ನು ಮಾತನಾಡಿಸಿದ್ದಾರೆ. ಕೇವಲ ಒಂದೆರಡು ಅಡಿಗಳ ಅಂತರದಲ್ಲಿ ಮಾತನಾಡಿಸಿದ್ದಾರೆ ಎಂದರು. ಹೀಗಾಗಿ ಕಲಬುರಗಿಯ ಪತ್ರಕರ್ತರನ್ನು ಮನೆಗಳಲ್ಲೇ ಪ್ರತ್ಯೇಕವಾಗಿರಿಸಿ (Quarantine) ನಿಗಾ ಇಡುತ್ತೇವೆ. ಜಿಲ್ಲಾಧಿಕಾರಿಗಳು ಇದರ ಬಗ್ಗೆ ಪರಿಶೀಲನೆ ಮಾಡುತ್ತಿದ್ದಾರೆ ಎಂದರು.
ಮಹಿಳೆ ಏರ್ ಪೋರ್ಟ್ ನಿಂದ ವಾಪಸ್ ತೆರಳಿದ್ದಾರೆ:
ಗ್ರೀಸ್ ನಿಂದ ಬೆಂಗಳೂರಿಗೆ ಬಂದಿದ್ದ ಸೋಂಕಿತ ದಂಪತಿ ಪೈಕಿ ಮಹಿಳೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಕ್ಕೆ ಬಂದಿರಲಿಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.
ಮಾರ್ಚ್ 8 ರಂದು ದಂಪತಿ 9.45 ರಾತ್ರಿ ಮುಂಬೈಯಿಂದ ಬೆಂಗಳೂರಿಗೆ ಬಂದಿದ್ದಾರೆ. ಮಾ.8 ರಂದು ಇಬ್ಬರೂ ಬೆಂಗಳೂರಿಗೆ ಬಂದಿದ್ದು ನಿಜ. ಆದರೆ, ಪತ್ನಿ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರ ಬಂದಿಲ್ಲ. ಇದು ಕೂಲಂಕಷ ತನಿಖೆ ಬಳಿಕ ಗೊತ್ತಾಗಿದೆ ಎಂದು ತಿಳಿಸಿದರು. ಮಾರ್ಚ್ 8 ರಂದು ಮುಂಬೈನಿಂದ ಇಂಡಿಗೋ ವಿಮಾನದಲ್ಲಿ ಬಂದಿದ್ದರು. ಮಾರ್ಚ್ 9 ರಂದು 1.40 ಮುಂಜಾನೆ ದೆಹಲಿಗೆ ತೆರಳಿದ್ದರು. ದಿಲ್ಲಿಯಿಂದ ಗತಿಮಾನ್ ಎಕ್ಸ್ ಪ್ರೆಸ್ ನಲ್ಲಿ ಆಗ್ರಾಗೆ ತೆರಳಿದ್ದಾರೆ. ಬೆಂಗಳೂರಿಗೆ ಬಂದಿದ್ದರೂ ನಿಲ್ದಾಣದಿಂದ ಹೊರಗೆ ಬಂದಿಲ್ಲ. ವಿಮಾನ ನಿಲ್ದಾಣದಿಂದಲೇ ದೆಹಲಿಗೆ ವಾಪಸ್ ಆಗಿದ್ದಾರೆ ಎಂದು ತಿಳಿಸಿದರು. ಈ ಬಗ್ಗೆ ಆಕೆಯ ಗಂಡ ಮೊದಲು ತಪ್ಪು ಮಾಹಿತಿ ನೀಡಿದ್ದರು. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪರಿಶೀಲಿಸುತ್ತೇವೆ ಎಂದರು.