ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಕೆ ಹೆಚ್ ಮುನಿಯಪ್ಪ ಬಿಜೆಪಿ ಸರ್ಪಡೆಯಾಗುವ ಬಗ್ಗೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ ಕೆ ಸುಧಾಕರ್ ಸುಳಿವು ನೀಡಿದ್ದಾರೆ. ಇಂದು ಕೆ ಹೆಚ್ ಮುನಿಯಪ್ಪ ಸದಾಶಿವನಗರದಲ್ಲಿನ ಸಚಿವ ಡಾ ಕೆ ಸುಧಾಕರ್ ನಿವಾಸಕ್ಕೆ ಭೇಟಿ ನೀಡಿರುವುದು ಇದಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ. ಇತ್ತೀಚೆಗಷ್ಟೇ ಸುಧಾಕರ್ ಅವರು ಕೆ ಹೆಚ್ ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದರು. ಇಂದು ಮತ್ತೆ ಸುಧಾಕರ್ ಭೇಟಿ ಮಾಡಿ ಅಚ್ಚರಿ ಹುಟ್ಟಿಸಿದ್ದಾರೆ.
ಬಳಿಕ ಮಾತನಾಡಿದ ಸಚಿವ ಡಾ ಕೆ ಸುಧಾಕರ್, ಮುನಿಯಪ್ಪ ಅವರ ಜತೆ ರಾಜಕೀಯ ಹೊರತಾದ ಸ್ನೇಹ ಇದೆ. ಅವರು ನಮ್ಮ ಕುಟುಂಬದ ಸ್ನೇಹಿತರು. ಯಾವುದೋ ಬೇರೆ ವಿಚಾರಕ್ಕೆ ಅವರು ಭೇಟಿ ಮಾಡಿದ್ದಾರೆ. ಮುನಿಯಪ್ಪನವರು ನಮ್ಮ ಪಕ್ಷ ಸೇರ್ತಾರೆ ಅಂತ ಆಶಾದಾಯಕವಾಗಿದ್ದೇವೆ. ಮುನಿಯಪ್ಪನವರಷ್ಟೇ ಅಲ್ಲ ಕಾಂಗ್ರೆಸ್ನ ಬೇರೆ ಬೇರೆ ನಾಯಕರು ನನ್ನ ಸಂಪರ್ಕದಲ್ಲಿದ್ದಾರೆ ಎಂದು ಸುಳಿವು ನೀಡಿದರು.
ಕಾಂಗ್ರೆಸ್ನ ಪೇಸಿಎಂ ಅಭಿಯಾನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಚಿವ ಸುಧಾಕರ್, ಕಾಂಗ್ರೆಸ್ನವರು ಇಷ್ಟು ಕೆಳ ಹಂತಕ್ಕೆ ಹೋಗಿ ರಾಜಕಾರಣ ಮಾಡುತ್ತಿದ್ದಾರೆ. ಕಾಂಗ್ರೆಸ್ನವರು ದೇಶದ ಜನರ ಮುಂದೆ ಬೆತ್ತಲೆ ಆಗುತ್ತಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಇದನ್ನೆಲ್ಲ ಮಾಡುತ್ತಿದ್ದಾರೆ. ಇವರೆಲ್ಲ ಬಹಳ ಸತ್ಯ ಹರಿಶ್ಚಂದ್ರರಾ? ರಾಜಕೀಯ ಲಾಭಕ್ಕಾಗಿ ಇದನ್ನು ಮಾಡುತ್ತಿದ್ದಾರೆ. ಯಾವ ನೈತಿಕತೆ ಇದೆ ಇವರಿಗೆ? ಮಾಜಿ ಸಿಎಂ ಸಿದ್ದರಾಮಯ್ಯ ರಸ್ತೆಗೆ ಬಂದು ಪೋಸ್ಟರ್ ಹಾಕ್ತಾರೆ ಅಂದ್ರೆ ಏನನ್ನಬೇಕು?. 75 ವರ್ಷಗಳ ರಾಜಕೀಯ ಇತಿಹಾಸದಲ್ಲಿ ಈಥರಹದ್ದನ್ನು ಯಾರಾದ್ರೂ ನೋಡಿದ್ದಾರಾ? ಎಂದು ಪ್ರಶ್ನಿಸಿದರು.
ಲಿಂಗಾಯತ ಸಿಎಂ ಅಭಿಯಾನ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ನವರು ಲಿಂಗಾಯತ ಸಮುದಾಯದ ಮುಖ್ಯಮಂತ್ರಿಯನ್ನು ಟಾರ್ಗೆಟ್ ಮಾಡಿದ್ದಾರೆ. ಪ್ರತೀ ಸಲವು ಲಿಂಗಾಯತ ಸಮುದಾಯದ ಮುಖ್ಯಮಂತ್ರಿಗಳನ್ನೇ ಕಾಂಗ್ರೆಸ್ನವರು ಟಾರ್ಗೆಟ್ ಮಾಡುತ್ತಾರೆ. ವೀರೇಂದ್ರ ಪಾಟೀಲ್, ಕೆಂಗಲ್ ಹನುಮಂತಯ್ಯ ಹೀಗೆ ಯಾರನ್ನೂ ಕಾಂಗ್ರೆಸ್ನವರು ಬಿಟ್ಟಿಲ್ಲ. ಯಾರ್ಯಾರು ಉತ್ತಮ ಆಡಳಿತ ಮಾಡ್ತಾರೋ ಅವರನ್ನೆಲ್ಲ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತದೆ. ಪ್ರಬಲ ಸಮುದಾಯಗಳ ಮುಖ್ಯಮಂತ್ರಿಗಳನ್ನೇ ಕಾಂಗ್ರೆಸ್ ಟಾರ್ಗೆಟ್ ಮಾಡುತ್ತದೆ ಎಂದು ಕಿಡಿಕಾರಿದರು.
ಇದನ್ನೂ ಓದಿ: BMS ಟ್ರಸ್ಟ್ ಅಕ್ರಮ ಬಗ್ಗೆ ಪ್ರಧಾನಿ ಮೋದಿಗೆ ದಾಖಲೆ ಸಮೇತ ದೂರು ಕೊಡುತ್ತೇನೆ: ಹೆಚ್ ಡಿ ಕುಮಾರಸ್ವಾಮಿ