ಬೆಂಗಳೂರು: ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಜೊತೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ.
ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಕಾವೇರಿಗೆ ಸಚಿವ ಶ್ರೀರಾಮುಲು ಭೇಟಿ ನೀಡಿದರು. ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ದೀಪಾವಳಿ ಹಬ್ಬದ ಶುಭ ಕೋರಿದರು. ನಂತರ ಕೆಲ ಸಮಯ ಅನೌಪಚಾರಿಕ ಮಾತುಕತೆ ನಡೆಸಿದರು.
ವಾಲ್ಮೀಕಿ ಸಮುದಾಯದ ಮೀಸಲಾತಿ ಹೆಚ್ಚಳ ಕುರಿತು ವಿಶೇಷವಾಗಿ ಶ್ರೀರಾಮುಲು ಮಾತುಕತೆ ನಡೆಸಿದ್ದಾರೆ. ಹಿಂದೆ ನೀಡಿದ್ದ ಭರವಸೆ, ಆಶ್ವಾಸನೆಗಳನ್ನು ನೆನಪಿಸುತ್ತಾ ಆದಷ್ಟು ಬೇಗ ಬೇಡಿಕೆ ಈಡೇರಿಕೆ ಮಾಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ರಾಜ್ಯ ಸಚಿವ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಸಾಧ್ಯತೆ ಇದ್ದು, ಒಂದು ವೇಳೆ ಡಿಸಿಎಂ ಸ್ಥಾನಗಳ ಸಂಖ್ಯೆ ಹೆಚ್ಚಿಸಲು ಮುಂದಾದಲ್ಲಿ ತಮ್ಮನ್ನು ಪರಿಗಣಿಸಿ ಎನ್ನುವ ಅಪೇಕ್ಷೆಯೂ ಇಂದಿನ ಸಿಎಂ ಭೇಟಿಯಲ್ಲಿ ಇತ್ತು ಎನ್ನಲಾಗಿದೆ. ಆದರೆ ನೇರವಾಗಿ ಈ ಕುರಿತು ಯಾವುದೇ ಮಾತುಕತೆಯನ್ನೂ ಸಿಎಂ ಜೊತೆ ಸಚಿವ ರಾಮುಲು ಆಡಿಲ್ಲ. ಕೇವಲ ತಮ್ಮ ಉಪಸ್ಥಿತಿ ಮೂಲಕವೇ ಅದನ್ನು ಸಿಎಂ ಗಮನಕ್ಕೆ ತರುವ ಪ್ರಯತ್ನ ನಡೆಸಿದ್ದಾರೆ ಎನ್ನಲಾಗುತ್ತಿದೆ.