ಬೆಂಗಳೂರು: ''ಯಡಿಯೂರಪ್ಪ ದೊಡ್ಡವರು, ರಾಜ್ಯದ ನಾಯಕರು ಅವರ ಬಗ್ಗೆ ನಾನು ಮಾತನಾಡಲ್ಲ. ಆದರೆ ಹದಿನೈದು ವರ್ಷಗಳ ಹಿಂದೆ ಪರಿಸ್ಥಿತಿ ಹೇಗಿತ್ತು ಎಂಬುದನ್ನು ಅವರನ್ನೇ ಕೇಳಿ'' ಎಂದು ಪರೋಕ್ಷವಾಗಿ ಬಿಎಸ್ವೈ ವಿರುದ್ಧ ಮೊದಲ ಬಾರಿಗೆ ಸಚಿವ ವಿ.ಸೋಮಣ್ಣ ಅಸಮಾಧಾನ ಹೊರಹಾಕಿದ್ದು, ಒಂದು ದಿನದ ದೆಹಲಿ ಭೇಟಿಗೆ ತೆರಳಿದ್ದಾರೆ. ಈ ವೇಳೆ ಹೈಕಮಾಂಡ್ ನಾಯಕರನ್ನೂ ಭೇಟಿ ಮಾಡಿ ತಮ್ಮ ಅಸಮಾಧಾನದ ಕುರಿತು ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇತ್ತೀಚೆಗೆ ಬಿಜೆಪಿಯ ಜವಾಬ್ದಾರಿಗಳಿಂದ ಅಂತರ ಕಾಯ್ದುಕೊಂಡು ಅಸಮಾಧಾನ ವ್ಯಕ್ತಪಡಿಸಿದ್ದ ವಸತಿ ಸಚಿವ ವಿ.ಸೋಮಣ್ಣ ದಿಢೀರ್ ದೆಹಲಿಗೆ ತೆರಳಿದ್ದಾರೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ ದೆಹಲಿಗೆ ಪ್ರಯಾಣಿಸಿದ್ದು, 10.25ಕ್ಕೆ ದೆಹಲಿ ತಲುಪಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಭೇಟಿ ಮಾಡಲಿರುವ ಸೋಮಣ್ಣ, ನಂತರ ಹೈಕಮಾಂಡ್ ಮಟ್ಟದ ಕೆಲ ನಾಯಕರನ್ನು ಭೇಟಿ ಮಾಡುವ ಸಾಧ್ಯತೆ ಇದೆ. ಇಂದು ರಾತ್ರಿಯೇ ಬೆಂಗಳೂರಿಗೆ ಮರಳಲಿದ್ದಾರೆ.
ನೇರ ರಾಜಕೀಯ ಎಂದ ಸೋಮಣ್ಣ: ದೆಹಲಿಗೆ ತೆರಳುವ ಮುನ್ನ ಮಾಧ್ಯಮದವರ ಜೊತೆ ಮಾತನಾಡಿದ ಸೋಮಣ್ಣ, ಮತ್ತೊಮ್ಮೆ ಭಾವುಕರಾದರು. ''ಇಲಾಖೆ ಕೆಲಸದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿ ಮಾಡಿ ಸಂಜೆ ವಾಪಸಾಗುತ್ತೇನೆ. ಪಕ್ಷವು ನನಗೆ ಒಳ್ಳೆಯ ಅವಕಾಶ ಕೊಟ್ಟಿದೆ, ನಾನು ಪಕ್ಷಕ್ಕಾಗಿ ದುಡಿದಿದ್ದೇನೆ. ಯಾರೊಂದಿಗೆ, ಯಾವಾಗ ಹೇಗೆ ನಡೆದುಕೊಳ್ಳಬೇಕೆಂಬುದು ಗೊತ್ತಿದೆ. ನಾನು ಯಾರ ಬಳಿಯೂ ಅಂಗಲಾಚಲ್ಲ, ಹಲ್ಲು ಕಿರಿದು ನಿಲ್ಲಲ್ಲ. ನೇರ ರಾಜಕೀಯ ಮಾಡಿಕೊಂಡು ಬಂದವನು. ಸದ್ಯದ ಪರಿಸ್ಥಿತಿಯಲ್ಲಿ ಸತ್ಯ ಕಹಿಯಾಗುತ್ತದೆ, ನೇರ ನುಡಿಗಳಿಂದ ಹಿನ್ನಡೆಯಾಗುತ್ತದೆ'' ಎಂದರು.
ಇದೇ ವೇಳೆ ಯಡಿಯೂರಪ್ಪ ಹಾಗೂ ವಿಜಯೇಂದ್ರ ಬಗ್ಗೆ ಬೇಸರ ಹೊರ ಹಾಕಿದ ಸೋಮಣ್ಣ, ''ಯಡಿಯೂರಪ್ಪ ದೊಡ್ಡವರು. ರಾಜ್ಯದ ನಾಯಕರು ಅವರ ಬಗ್ಗೆ ನಾನು ಮಾತನಾಡಲ್ಲ. ಹದಿನೈದು ವರ್ಷಗಳ ಹಿಂದೆ ಹೇಗಿತ್ತು ಎಂಬುದನ್ನು ಅವರನ್ನೇ ಕೇಳಿ. ಅವರು ಸಹ ಪಕ್ಷಕ್ಕಾಗಿ ಶ್ರಮಿಸಿದವರನ್ನು, ಚಟುವಟಿಕೆಯಿಂದ ಕೆಲಸ ಮಾಡುವರನ್ನು ಗಮನಿಸಬೇಕು ಎಂದು ಪರೋಕ್ಷವಾಗಿ ಮೊದಲ ಸಲ ಬಿಎಸ್ವೈ ವಿರುದ್ಧ ಅಸಮಾಧಾನ ಹೊರಹಾಕಿದರು. ನನಗೆ ಅಧಿಕಾರದ ಮೇಲೆ ವ್ಯಾಮೋಹ ಇಲ್ಲ. ನಾನು ಬೆಳಗ್ಗೆ ನಾಲ್ಕು ಗಂಟೆಗೆ ಎದ್ದೇಳುತ್ತೇನೆ, ಕಾಯಕ ಮಾಡುತ್ತೇನೆ. ಪಕ್ಷ ಕೊಟ್ಟ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಿ ಜನತೆಗೆ ತಲುಪಿಸುವ ಕೆಲಸ ಮಾಡುತ್ತೇನೆ'' ಎಂದರು.
ಸೋಮಣ್ಣ ಮನವೊಲಿಕೆ: ಪಕ್ಷದ ವಿರುದ್ಧ ಅಸಮಾಧಾನಗೊಂಡು ಪಕ್ಷದ ಜನ ಸಂಕಲ್ಪ ಯಾತ್ರೆಗಳಿಂದ ದೂರ ಉಳಿದು ಕ್ಷೇತ್ರದಲ್ಲಿ ಸುತ್ತಾಡುತ್ತಿರುವ ವಸತಿ ಸಚಿವ ವಿ.ಸೋಮಣ್ಣ ಮನವೊಲಿಕೆ ಕಾರ್ಯಕ್ಕೆ ರಾಜ್ಯ ಬಿಜೆಪಿ ನಾಯಕರು ತಡವಾಗಿ ಮುಂದಾಗಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾದ್ಯಕ್ಷ ನಳಿನ್ ಕುಮಾರ್ ಕಟೀಲ್ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಖುದ್ದಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಆದರೆ ಯಡಿಯೂರಪ್ಪ ಅವರು ಮಾತುಕತೆ ನಡೆಸದಿರುವುದು ಸೋಮಣ್ಣ ಅಸಮಾಧಾನ ಹೆಚ್ಚಾಗಲು ಕಾರಣ ಎನ್ನಲಾಗಿದೆ.
ಸೋಮಣ್ಣ ಪಕ್ಷ ಬಿಡಲ್ಲ, ಅವರೊಂದಿಗೆ ಮಾತನಾಡುತ್ತೇನೆ ಎಂದು ಯಡಿಯೂರಪ್ಪ ಹೇಳಿದ್ದರಾದರೂ ಇನ್ನೂ ಮಾತುಕತೆ ನಡೆಸಿಲ್ಲ. ಇದು ಸೋಮಣ್ಣ ಬೇಸರಕ್ಕೆ ಕಾರಣವಾಗಿದೆ. ಯಡಿಯೂರಪ್ಪ ಅವರನ್ನೇ ನಂಬಿ ಪಕ್ಷಕ್ಕೆ ಬಂದಿದ್ದೇನೆ, ಆದರೂ ಪ್ರಸ್ತುತ ರಾಜಕೀಯ ವಿದ್ಯಮಾನಗಳಲ್ಲಿ ಸೋಮಣ್ಣಗೆ ಟಿಕೆಟ್ ಇಲ್ಲ ಎನ್ನುವ ಸುದ್ದಿ ಹರಿದಾಡುತ್ತಿವೆ. ಇದರ ಬಗ್ಗೆ ಬಿಎಸ್ವೈ ಮಾತನಾಡದಿರುವುದಕ್ಕೆ ಸೋಮಣ್ಣ ಬೇಸರಗೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಪರಿಸ್ಥಿತಿ ಅರ್ಥ ಮಾಡಿಕೊಂಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೋಮಣ್ಣ ಅವರನ್ನು ದೆಹಲಿಗೆ ಕರೆಸಿಕೊಂಡಿದ್ದು, ವರಿಷ್ಠರ ಭೇಟಿ ಮಾಡಿಸಿ ಮಾತುಕತೆ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಇದನ್ನೂ ಓದಿ: ಎಲ್ಲರಿಗೂ ಮಕ್ಕಳು ಇರ್ತಾರೆ.. ಬೇರೆ ರಾಜಕಾರಣಿ ಮಕ್ಕಳಿಗೆ ಟಿಕೆಟ್ ಇಲ್ಲವೆಂದರೆ ನನಗೂ ಬೇಡ : ವಿ ಸೋಮಣ್ಣ