ಬೆಂಗಳೂರು: ರಾಜ್ಯದ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿಪಡಿಸಿರುವ ಆದಾಯದ ಮಿತಿಯನ್ನು ಹೆಚ್ಚಳ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ವಸತಿ ಇಲಾಖೆ ಸಚಿವ ವಿ. ಸೋಮಣ್ಣ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಇಂದು ಶೂನ್ಯ ವೇಳೆಯಲ್ಲಿ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಪ್ರಸ್ತಾಪಕ್ಕೆ ಉತ್ತರಿಸಿದ ಅವರು, ವಸತಿ ಯೋಜನೆಗಳಿಗೆ ಫಲಾನುಭವಿಗಳಾಗಲು ಪ್ರಸ್ತುತ 32 ಸಾವಿರ ರೂ. ವಾರ್ಷಿಕ ಆದಾಯ ನಿಗದಿ ಮಾಡಿರುವುದು ಅವೈಜ್ಞಾನಿಕ ಎನ್ನುವುದು ಸರ್ಕಾರದ ಗಮನಕ್ಕೆ ಬಂದಿದೆ.
ಹಾಗಾಗಿ, ಕೇಂದ್ರ ಸರ್ಕಾರ ಬಿಪಿಎಲ್ ಕಾರ್ಡುದಾರರಿಗೆ ನಿಗದಿಪಡಿಸಿರುವ 1.20 ಲಕ್ಷ ಆದಾಯ ಮಿತಿಯನ್ನು ವಸತಿ ಯೋಜನೆಗಳಿಗೆ ನಿಗದಿ ಮಾಡಲಾಗುವುದು. ಈ ಬಗ್ಗೆ ಮುಖ್ಯಮಂತ್ರಿಗಳು ಬಜೆಟ್ ಉತ್ತರದ ಸಂದರ್ಭದಲ್ಲಿ ಹೇಳಲಿದ್ದಾರೆ.
ನಗರ ಪ್ರದೇಶಗಳಲ್ಲೂ ವಸತಿ ಯೋಜನೆಗಳ ಫಲಾನುಭವಿಗಳಿಗೆ ನಿಗದಿ ಮಾಡಿರುವ ವಾರ್ಷಿಕ ಆದಾಯ 87 ಸಾವಿರ ರೂ.ಗಳನ್ನು 3 ಲಕ್ಷ ರೂ.ಗಳವರೆಗೂ ಹೆಚ್ಚಿಸಲಾಗುವುದು ಎಂದರು.
ಇದಕ್ಕೂ ಮೊದಲು ವಿಷಯ ಪ್ರಸ್ತಾಪಿಸಿದ್ದ ರಮೇಶ್ ಕುಮಾರ್ ಅವರು, ವಸತಿ ಯೋಜನೆಗಳಿಗೆ 32 ಸಾವಿರ ರೂ. ಆದಾಯ ಮಿತಿ ನಿಗದಿಯಾಗಿದೆ. ಆದರೆ, ಕಂದಾಯ ಇಲಾಖೆಯವರು 45 ಸಾವಿರ ರೂ.ಗಳಿಗಿಂತ ಕಡಿಮೆ ಆದಾಯ ಪ್ರಮಾಣ ಪತ್ರಗಳನ್ನು ನೀಡುವುದಿಲ್ಲ. ಹಾಗಾಗಿ, ಇದನ್ನು ಸರಿಪಡಿಸಿ. ಇಲ್ಲದಿದ್ದರೆ ಫಲಾನುಭವಿಗಳಿಗೆ ತೊಂದರೆಯಾಗುತ್ತದೆ ಎಂಬುದನ್ನು ಸರ್ಕಾರದ ಗಮನಕ್ಕೆ ತಂದರು.
ಇದನ್ನೂ ಓದಿ: 4 ತಿಂಗಳಿಂದ ಸಂಬಳವಿಲ್ಲ: ಕೆಲಸಕ್ಕೆ ಗೈರಾಗಿ ಅರಣ್ಯ ವೀಕ್ಷಕರ ಪ್ರತಿಭಟನೆ