ಬೆಂಗಳೂರು: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಇದೀಗ ಸ್ವಂತ ಮನೆಯನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ನಿವಾಸದ ಪಕ್ಕದಲ್ಲೇ ಕಟ್ಟಿಸಿಕೊಂಡು ಗೃಹ ಪ್ರವೇಶ ನೆರವೇರಿಸಿದ್ದಾರೆ.
ಲಾಕ್ಡೌನ್ ಮಾರ್ಗಸೂಚಿಯಲ್ಲಿ ಷರತ್ತುಗಳೊಂದಿಗೆ ಸಮಾರಂಭಗಳನ್ನು ನಡೆಸಲು ಅವಕಾಶ ಕಲ್ಪಿಸಿದ್ದು ಅದರಂತೆ ಇಂದು ಸಚಿವ ಜಾರಕಿಹೊಳಿ ತಮ್ಮ ನೂತನ ನಿವಾಸ 'ಸಂಜು'ಗೃಹ ಪ್ರವೇಶವನ್ನು ಪೂಜಾ ಕೈಂಕರ್ಯ, ಹೋಮ, ಹವನಗಳೊಂದಿಗೆ ಶಾಸ್ತ್ರೋಕ್ತವಾಗಿ ನೆರವೇರಿಸಿದರು.
ರಮೇಶ್ ಜಾರಕಿಹೊಳಿ ನೂತನ ನಿವಾಸದ ಗೃಹಪ್ರವೇಶ ಕಾರ್ಯಕ್ರಮಕ್ಕೆ ನಾಯಕರ ದಂಡೇ ಆಗಮಿಸಿತ್ತು. ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ, ಮಾಜಿ ಸಂಸದ ಬಿ.ವಿ.ನಾಯಕ್, ಶಾಸಕ ಬಸನಗೌಡ ದದ್ದಲ್, ಹೆಚ್.ವಿಶ್ವನಾಥ್, ಆರ್.ಶಂಕರ್ ಸೇರಿ ಹಲವರು ಆಗಮಿಸಿದ್ದರು.
ಲಾಕ್ಡೌನ್ ಮಾರ್ಗಸೂಚಿ ಉಲ್ಲಂಘನೆ: ಇನ್ನು ನೂತನ ನಿವಾಸದ ಗೃಹ ಪ್ರವೇಶ ಸಮಾರಂಭಕ್ಕೆ ಬಂದ ಬಹುತೇಕರು ಮಾಸ್ಕ್ ಧರಿಸಿರಲಿಲ್ಲ, ನಿನ್ನೆಯಷ್ಟೇ ಸರ್ಕಾರದಿಂದಲೇ ಮಾಸ್ಕ್ ದಿನಾಚರಣೆ ಆಚರಿಸಲಾಗಿದೆ. ರಾಜ್ಯದಲ್ಲಿ ಮಾಸ್ಕ್ ಕಡ್ಡಾಯಗೊಳಿಸಿದೆ. ಆದರೂ ಕೂಡ ಸಚಿವ ಜಾರಕಿಹೊಳಿ ಸೇರಿದಂತೆ ಸಾಕಷ್ಟು ಜನರು ಮಾಸ್ಕ್ ಧರಿಸಿರಲಿಲ್ಲ, ಸಾಮಾಜಿಕ ಅಂತರದ ನಿಯಮವನ್ನೂ ಪಾಲನೆ ಮಾಡಿಲ್ಲ, ಎಲ್ಲರೂ ಗುಂಪುಗೂಡಿ, ಮಾಸ್ಕ್ ಇಲ್ಲದೇ ಕುಶಲೋಪರಿಯಲ್ಲಿ ತೊಡಗಿದ್ದ ದೃಶ್ಯ ಕಂಡುಬಂದಿತು.
ಡಿ.ಕೆ. ಶಿವಕುಮಾರ್ ನಿವಾಸದ ಪಕ್ಕದಲ್ಲೇ ಮನೆ: ಇನ್ನು ಡಿ.ಕೆ ಶಿವಕುಮಾರ್ ವಿರುದ್ಧ ರಾಜಕೀಯ ಸೇಡಿನಿಂದಲೇ ಜಲಸಂಪನ್ಮೂಲ ಖಾತೆಯನ್ನು ರಮೇಶ್ ಜಾರಕಿಹೊಳಿ ಪಡೆದುಕೊಂಡರು ಎನ್ನಲಾಗಿದೆ. ಕಚೇರಿ, ಸರ್ಕಾರಿ ಬಂಗಲೆಗೂ ಬೇಡಿಕೆ ಇಟ್ಟಿದ್ದರೂ ಕೂಡ ಕಚೇರಿ ಮಾಧ್ಯಮ ಸಮನ್ವಯಕಾರರಿಗೆ, ಕ್ರೆಸೆಂಟ್ ರಸ್ತೆಯಲ್ಲಿನ ಸರ್ಕಾರಿ ಬಂಗಲೆ ಜಗದೀಶ್ ಶೆಟ್ಟರ್ಗೆ ಹಂಚಿಕೆಯಾಗಿದ್ದ ಕಾರಣ ಖಾತೆಯೊಂದಕ್ಕೆ ತೃಪ್ತಿಪಟ್ಟುಕೊಂಡಿದ್ದರು. ಬೆಳಗಾವಿ ರಾಜಕಾರಣದಲ್ಲಿ ಡಿ.ಕೆ. ಶಿವಕುಮಾರ್ ಹಸ್ತಕ್ಷೇಪದಿಂದ ಕುಪಿತರಾಗಿರುವ ರಮೇಶ್ ಜಾರಕಿಹೊಳಿ ನಂತರ ಬದಲಾದ ರಾಜಕೀಯ ವಿದ್ಯಮಾನಗಳಿಂದ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿ ಸಚಿವರೂ ಆಗಿದ್ದು, ಇದೀಗ ಡಿಕೆಶಿ ನಿವಾಸದ ಪಕ್ಕದಲ್ಲೇ ಮನೆ ಮಾಡಿ ಮತ್ತೇನು ಸಂದೇಶ ನೀಡಲು ಹೊರಟಿದ್ದಾರೋ ಗೊತ್ತಿಲ್ಲ.