ಬೆಂಗಳೂರು : ಮೀನುಗಾರರಿಗೆ ಹಾಗೂ ಸಮುದ್ರ ತೀರ ಪ್ರದೇಶದ ನಿವಾಸಿಗಳಿಗೆ ಚಂಡಮಾರುತದ ಸಂಬಂಧ ಮುನ್ಸೂಚನೆ ನೀಡುವ ಅಲರ್ಟ್ ಅಲರಾಂ ವ್ಯವಸ್ಥೆ ಅಳವಡಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಈ ಕುರಿತು ವಿಧಾನಸೌಧದಲ್ಲಿ ಅವರು ಮಾತನಾಡಿದರು. ಚಂಡಮಾರುತ ಪೀಡಿತ ಕರಾವಳಿ ಪ್ರದೇಶದ ಒಟ್ಟು 40 ಕಡೆಗಳಲ್ಲಿ ಮುನ್ಸೂಚನೆ ನೀಡುವ ಕೇಂದ್ರಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದನ್ನು 60ಕ್ಕೆ ಏರಿಕೆ ಮಾಡಲು ಚಿಂತನೆ ನಡೆದಿದೆ.
ಸಮುದ್ರ ತೀರದಲ್ಲಿ 6 ಕಿ.ಮೀ. ವ್ಯಾಪ್ತಿವರೆಗೆ ಸೈರನ್ ನೀಡುವ ವ್ಯವಸ್ಥೆ ಇದಾಗಿದೆ. ಕೇಂದ್ರ ಸರ್ಕಾರದಿಂದ ಇದಕ್ಕೆ ಅನುದಾನ ಬರಲಿದೆ. ಒಂದೊಂದು ಕೇಂದ್ರಕ್ಕೆ ₹12 ಕೋಟಿ ಖರ್ಚಾಗುತ್ತದೆ ಎಂದರು.
ಈ ಮೂಲಕ ತೀರ ಪ್ರದೇಶದ ಜನರಿಗೆ, ಮೀನುಗಾರಿಕೆಗೆ ಚಂಡಮಾರುತಗಳ ಸುಳಿವನ್ನ ನೀಡಲಾಗುವುದು. ಇದರಿಂದ ಕರಾವಳಿ ಭಾಗದ ಜನರಿಗೆ ಅನುಕೂಲವಾಗಲಿದೆ. ಅದರಲ್ಲೂ ಮೀನುಗಾರರಿಗೆ ಇದು ಹೆಚ್ಚು ಉಪಯೋಗವಾಗಲಿದೆ ಎಂದು ತಿಳಿಸಿದರು.
ಗ್ರಾಮ ಪಂಚಾಯತ್‌ಗಳಲ್ಲಿ ಸಿಡಿಲು ಮುನ್ಸೂಚನಾ ವ್ಯವಸ್ಥೆ : ರಾಜ್ಯದಲ್ಲಿ ಸಿಡಿಲು ಹೊಡೆದು ಹಲವಾರು ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಸಂಬಂಧ ಸರ್ಕಾರ ಒಂದು ತಿಂಗಳಲ್ಲಿ ಸಿಡಿಲು ಹಾವಳಿ ಹೆಚ್ಚಿರುವ ಗ್ರಾಮಗಳಲ್ಲಿ ಮುನ್ಸೂಚನಾ ಸಿಸ್ಟಂನ್ನು ಅಳವಡಿಕೆ ಮಾಡಲಾಗುವುದು ಎಂದು ತಿಳಿಸಿದರು.
ಈ ವ್ಯವಸ್ಥೆಯಿಂದ ಒಂದೂವರೆ ಕಿ.ಮೀ.ವರೆಗೆ ಕೇಳಿಸುವಷ್ಟು ಮೈಕ್ ಸಿಸ್ಟಂ ಮೂಲಕ ಅಲರ್ಟ್ ಮಾಡಲಾಗುತ್ತದೆ. ಬೆಂಗಳೂರಿನಿಂದ ಕೇಂದ್ರೀಕೃತ ವ್ಯವಸ್ಥೆಯೊಂದಿಗೆ ಸಿಡಿಲು ಬಗ್ಗೆ ಮುನ್ಸೂಚನೆ ನೀಡಲಾಗುತ್ತದೆ. ಪ್ರತಿ ಅಲರ್ಟ್ ಸಿಸ್ಟಂಗೆ ₹1.50ಲಕ್ಷ ವೆಚ್ಚ ತಗುಲಲಿದೆ. ಇದು ಗ್ರಾಮ ಪಂಚಾಯತ್‌ಗಳಲ್ಲಿ ಅಲರ್ಟ್ ಆಗಲಿದೆ ಎಂದು ತಿಳಿಸಿದರು.
ಓದಿ: ಆಗಸ್ಟ್ 19 ರಿಂದ ಶುರುವಾಗಲಿದೆ ದ್ವಿತೀಯ ಪಿಯುಸಿ ಪರೀಕ್ಷೆ; ಆ ಭಾಗದಿಂದ ಬರೋರಿಗೆ ನೆಗೆಟಿವ್ ರಿಪೋರ್ಟ್ ಕಡ್ಡಾಯ..