ಬೆಂಗಳೂರು: ಕಾಂಗ್ರೆಸ್‌ನವರು ಸೋತು ಸುಣ್ಣವಾದ ಮೇಲೆ ದಿನಕ್ಕೊಂದು ರೀತಿಯ ಗಿಮಿಕ್ ಮಾಡುತ್ತಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸೋತು ಮೂಲೆಗುಂಪಾಗಿದೆ. ಅವರು ದಿನಕ್ಕೊಂದು ಗಿಮಿಕ್ ಮಾಡ್ತಿದ್ದಾರೆ. ಅವರು ತಾವು ಬದುಕಿ ಉಳಿದಿದ್ದೇವೆ ಅಂತ ತೋರಿಸೋಕೆ ಹೊರಟಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಸೋತು ಸುಣ್ಣವಾಗಿದ್ದಾರೆ. ಅದನ್ನು ಮರೆಮಾಚಲು ಈ ರೀತಿ ದೊಂಬರಾಟ ನಡೆಯುತ್ತಿದೆ ಎಂದು ಟೀಕಿಸಿದರು.
ಯಾವತ್ತಾದರೂ ಪೆಟ್ರೋಲ್, ಡೀಸೆಲ್ ಬೆಲೆ ಕಮ್ಮಿ ಆಗಿತ್ತಾ?. ಕಾಂಗ್ರೆಸ್‌ವರಿದ್ದಾಗ ಬೆಲೆ ಏರಿಕೆಯಾದರೆ ಆರ್ಥಿಕ ಸುಧಾರಣೆಗಾಗಿದೆ ಅಂತಾರೆ. ಬಿಜೆಪಿ ಅಧಿಕಾರದಲ್ಲಿದ್ದಾಗ ಬೆಲೆ ಏರಿಕೆಯಾದ್ರೆ ಅದು ಅಕ್ರಮ, ಅನೈತಿಕ ಅಂತಾರೆ. ಬೇರೆ ಯಾರಾದ್ರೂ ಆಗಿದ್ದರೆ ಸೋತ ಬಗ್ಗೆ ಆತ್ಮವಿಮರ್ಶೆ ಮಾಡಿಕೊಳ್ಳುತ್ತಿದ್ದರು ಎಂದು ವಾಗ್ದಾಳಿ ನಡೆಸಿದರು. ಮೂಲೆಗುಂಪಾಗಿರುವ ಕಾಂಗ್ರೆಸ್ ಟಾಂಗ ಓಡಿಸೋದು, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತವಾಗಿದೆ ಎಂದು ಕಿಡಿಕಾರಿದರು.
ದೇಶದಲ್ಲಿ ನರೇಂದ್ರ ಮೋದಿ ಸರ್ಕಾರವಿದೆ. ಈ ಹಿಂದೆ, ಇಂದು, ಮುಂದೆಯೂ ನರೇಂದ್ರ ಮೋದಿ ಸರ್ಕಾರ ಇರಲಿದೆ. ಅವರನ್ನು ಎದುರಿಸುವ ಎದುರಾಳಿ ಯಾರೂ ಇಲ್ಲ ಎಂದರು.
ಲೋಕಸಭಾ ಸ್ಪೀಕರ್ ಓಂ ಬಿರ್ಲಾ ವಿಧಾನಮಂಡಲದ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ವಿಧಾನಸಭೆಯಲ್ಲೂ ಕೂಡ ಸಂವಿಧಾನ ಬಗ್ಗೆ ಚರ್ಚೆ ಆಯ್ತು. ನಾಲ್ಕು ದಿನವಾದರೂ ಕಾಂಗ್ರೆಸ್ ಚರ್ಚೆ ಮಾಡಿದ್ರು. ರಾಜ್ಯಪಾಲರು, ರಾಷ್ಟ್ರಪತಿ, ಸ್ಪೀಕರ್ ಯಾವುದೇ ಪಕ್ಷದ ವ್ಯಕ್ತಿಯಲ್ಲ. ಅವರಿಗೆ ಗೌರವ ಕೊಡುವ ಕೆಲಸ ಮಾಡಬೇಕು. ಆದರೆ ಅದನ್ನು ಮಾಡದೆ ಕಾಂಗ್ರೆಸ್ ವಿರೋಧಿಸುತ್ತಿದ್ದು, ಇದಕ್ಕೆ ನಮ್ಮ ಧಿಕ್ಕಾರವಿದೆ ಎಂದು ಹೇಳಿದರು.
ಡಾ.ರಾಜ್ ಕುಮಾರ್ ಅವರೇ ಹೇಳಿದ್ದಾರೆ, ನಾನು ಎಲ್ಲವನ್ನೂ ಕಲಿಯಬೇಕು ಅಂತ. ಹಾಗೆಯೇ ನಾವು ಓಂ ಬಿರ್ಲಾ ಅವರಿಂದ ಕಲಿಯುತ್ತೇವೆ. ಕಾಂಗ್ರೆಸ್‌ನವರು 60 ವರ್ಷ ದೇಶವನ್ನು ಹಾಳು ಮಾಡಿದ್ರು. ನನ್ನ ಪ್ರಕಾರ ಜಂಟಿ ಅಧಿವೇಶನಕ್ಕೆ ಕಾಂಗ್ರೆಸ್‌ನವರು ಬರೋದೇ ಇಲ್ಲ. ಜೆಡಿಎಸ್‌ನವರು ಬರಲಿದ್ದಾರೆ ಎಂದು ಹೇಳಿದರು. ಜೆಡಿಎಸ್ ನಿಜವಾದ ವಿರೋಧ ಪಕ್ಷ. ಅವರೇ ವಿಪಕ್ಷವಾಗಿ ಕೆಲಸ ಮಾಡ್ತಿದ್ದಾರೆ, ಕಾಂಗ್ರೆಸ್ ಎಲ್ಲೂ ಅಸ್ತಿತ್ವದಲ್ಲಿ ಇಲ್ಲ ಎಂದು ಟೀಕಿಸಿದರು.