ಬೆಂಗಳೂರು: ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಿಸುವ ಬಗ್ಗೆ ಚರ್ಚೆ ನಡೆದಿದ್ದು, ಮುಂದೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.
ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ ನೀಡುವ ಸಂಬಂಧ ತಮ್ಮ ನೇತೃತ್ವದಲ್ಲಿ ರೇಸ್ ಕೋರ್ಸ್ ಸಿಎಂ ನಿವಾಸದಲ್ಲಿ ನಡೆದ ಸಭೆ ಬಳಿಕ ಮಾತನಾಡಿದ ಅವರು, ಕಂದಾಯ, ಬಿಬಿಎಂಪಿ ಹಾಗೂ ಪೊಲೀಸ್ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಕೋರ್ಟ್ ಆದೇಶಗಳನ್ನ ಕೂಡ ಪರಿಶೀಲನೆ ಮಾಡಲಾಯಿತು. ಎಜಿ ಜತೆ ಕೂಡ ಮಾತನಾಡಿದ್ದೇವೆ. ಪೊಲೀಸ್ ಇಲಾಖೆ ಬಂದೋಬಸ್ತ್ ಬಗ್ಗೆ ಅವರು ಕೂಡ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ಅರ್ಜಿಗಳನ್ನ ಪರಿಶೀಲನೆ ಮಾಡಿದ್ದೇವೆ. 2 ಅರ್ಜಿಗಳು ಮಾತ್ರ ಸ್ಥಳೀಯರು ಕೊಟ್ಟಿದ್ದಾರೆ. ಇನ್ನು 2 ದಿನ ಅರ್ಜಿ ನೀಡಲು ಅವಕಾಶ ಕೊಡುತ್ತೇವೆ ಎಂದರು.
ಮುಸ್ಲಿಂ ಸಂಘಟನೆಗಳು ಈ ಮೈದಾನಕ್ಕೋಸ್ಕರ ಹೋರಾಟ ಮಾಡುತ್ತಿದ್ದಾರೆ. ಅವರು ಸುಪ್ರೀಂಕೋರ್ಟ್ಗೆ ಸೋಮವಾರ ಮನವಿ ಸಲ್ಲಿಸುತ್ತಾರೆ ಎಂಬ ಮಾಹಿತಿ ಇದೆ. ಹೀಗಾಗಿ ಸಾರ್ವಜನಿಕರಿಗೆ ಹೇಳುತ್ತಿದ್ದೇನೆ ಅರ್ಜಿ ಹಾಕುವವರು ಹಾಕಬಹುದು. ನಾನು ಕಂದಾಯ ಸಚಿವನಾಗಿ ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಿಎಂ ಜೊತೆ ಸುಮಾರು 2 ಗಂಟೆಗಳ ಕಾಲ ಈ ಬಗ್ಗೆ ಚರ್ಚೆ ನಡೆಸಿದ್ದೇನೆ. ಅವರು ಇಂದು ಸಭೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಸಭೆ ಮಾಡಿದ್ದೇವೆ ಎಂದರು.
ಸಭೆಯಲ್ಲಿ ಗಣೇಶೋತ್ಸವ ಮಾಡುವುದಾದರೆ ಹೇಗೆ ಮಾಡಬೇಕು?. ಮುಂಜಾಗ್ರತಾ ಕ್ರಮಗಳೇನು?, ಎಲ್ಲಿ ಕೂರಿಸಬೇಕು, ಸಂಭ್ರಮಾಚರಣೆ ಬಗ್ಗೆ ಹಾಗೂ ಮೆರವಣಿಗೆ ಎಲ್ಲಿಂದ ಸಾಗಬೇಕು ಪ್ರತಿಯೊಂದರ ಬಗ್ಗೆ ಇಂದು ಚರ್ಚೆ ಮಾಡಿದ್ದೇವೆ ಎಂದರು. ಜಮೀರ್ ಅಹ್ಮದ್ ವಿರೋಧ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, 75 ವರ್ಷಗಳಿಂದ ರಾಷ್ಟ್ರಧ್ವಜ ಹಾರಿಸಿಲ್ಲ, ವಿರೋಧಿಸುತ್ತಲೇ ಬಂದಿದ್ದಾರೆ. ಕೋಳಿ ಕೇಳಿ ಮಸಾಲೆ ಅರೆಯೋಕೆ ಆಗುತ್ತಾ? ಎಂದು ತಿರುಗೇಟು ನೀಡಿದರು.
ಸಿಎಂ ರೇಸ್ ಕೋರ್ಸ್ ನಿವಾಸದಲ್ಲಿ ಮಹತ್ವದ ಸಭೆ: ಹೈಕೋರ್ಟ್ ವಿಭಾಗೀಯ ಪೀಠದ ತೀರ್ಪು ಹಿನ್ನೆಲೆ ಕಂದಾಯ ಸಚಿವ ಆರ್ ಅಶೋಕ್ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.
ಇದನ್ನೂ ಓದಿ: ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ: ಸಿಎಂ ಜೊತೆ ಚರ್ಚಿಸಿ ನಿರ್ಧಾರವೆಂದ ಅಶೋಕ್