ಬೆಂಗಳೂರು : ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಅಯೋಧ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕೂ ಸಿದ್ಧ. ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾವು ಹಿಂದುಗಳಲ್ವಾ?. ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು.
ಸಾಮಾನ್ಯವಾಗಿ ಕ್ರಮ ತೆಗೆದುಕೊಂಡಿದ್ದಾರೆ : ಸೆಲೆಬ್ರಿಟಿಸ್ಗೆ ಪಬ್ನಲ್ಲಿ ನೋಟಿಸ್ ವಿಚಾರವಾಗಿ ಪ್ರತಿಕ್ರಿಯಿಸಿದ ಪರಮೇಶ್ವರ್, 'ರೆಗ್ಯುಲರ್ ಆಗಿ ಕ್ರಮ ತೆಗೆದುಕೊಂಡಿದ್ದಾರೆ. ಒಂದು ಸ್ಟೇಷನ್ ಲಿಮಿಟ್ ನಲ್ಲಿ ಕಾನೂನು ಬಾಹಿರ ಚಟುವಟಿಕೆ ನಡೆದರೆ ಕ್ರಮ ಆಗಲೇಬೇಕು. ನಾನೇ ಗೃಹ ಸಚಿವನಾಗಿ ಕೇಳಿಯೇ ಕೇಳುತ್ತೇನೆ. ಪೊಲೀಸರು ಅವರ ವ್ಯಾಪ್ತಿಯಲ್ಲಿ ಅಚ್ಚುಕಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ಸೆಲೆಬ್ರಿಟಿಗಳ ಹೆಸರು ನನಗೇ ಗೊತ್ತಿಲ್ಲ. ಪೊಲೀಸರು ಎಫ್ಐಆರ್ ಮಾಡುವಾಗ ಎಲ್ಲವೂ ಮಾಹಿತಿ ಇರುತ್ತದೆ. ಸ್ಟೇಟ್ ಮೆಂಟ್ ಕೊಡುವಾಗ ಎಲ್ಲರ ಮಾಹಿತಿಯೂ ಹೊರ ಬರುತ್ತದೆ' ಎಂದರು.
ಲೋಕಸಭೆಗೆ ಸ್ಪರ್ಧಿಸುವ ಬಗ್ಗೆ ಚರ್ಚೆ ಆಗಿಲ್ಲ : ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ಬಗ್ಗೆ ಈವರೆಗೂ ಚರ್ಚೆಯಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿ ಬಂದಿತ್ತು. ಈ ಸಲ ಕೋಲಾರ ಕ್ಷೇತ್ರಕ್ಕೆ ಕೇಳಿ ಬರುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯು ಚರ್ಚೆ ನಡೆದಿಲ್ಲ. ಹೀಗಾಗಿ ಚುಮಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಅಧಿಕೃತ ಎಂದು ಪರಮೇಶ್ವರ್ ತಿಳಿಸಿದರು.
ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೆವಾಲಾ ಅವರು ರಾಜ್ಯಕ್ಕೆ ಆಗಮಿಸಲಿದ್ದಾರೆ. ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಲ್ಲ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ಸುರ್ಜೆವಾಲಾ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ರಾಜ್ಯದ ಎಲ್ಲ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಕಳೆದ ಚುನಾವಣೆಗಿಂತ ಈ ಬಾರಿ ನಮ್ಮ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಬಡ ಜನರ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಹೆಚ್ಚು ಇಂಪ್ಯಾಕ್ಟ್ ಆಗಲಿದೆ ಎಂದು ಪರಮೇಶ್ವರ್ ಅಭಿಪ್ರಾಯಪಟ್ಟರು.
ಈ ರೀತಿ ಏಕೆ ಮಾತನಾಡುತ್ತಾರೋ? : ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ದೊಡ್ಡವರು. ಅವರು ಸರ್ಕಾರದ ಅಭಿವೃದ್ಧಿ, ಜವಾಬ್ಧಾರಿ ಕುರಿತು ಹೇಳಿಕೆ ನೀಡಿದರೆ ಪ್ರತಿಕ್ರಿಯಿಸಬಹುದು. ಅವರು ಬಳಸುವ ಅನಗತ್ಯ ಪದಗಳ ಬಗ್ಗೆ ಹೇಗೆ ಪ್ರತಿಕ್ರಿಯಿಸಬೇಕು. ನಾನು ಅವರೊಂದಿಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಈ ರೀತಿ ಏಕೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರ ರೀತಿ ನನಗೆ ಮಾತನಾಡಲು ಬರುವುದಿಲ್ಲ ಎಂದರು.
ಕರವೇ ಅಧ್ಯಕ್ಷ ನಾರಾಯಣ ಗೌಡ ಅವರು ಬಿಡುಗಡೆ ನಂತರ ಮತ್ತೆ ಪ್ರತಿಭಟನೆ ನಡೆಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಪರಮೇಶ್ವರ್, ಪ್ರತಿಭಟನೆ ನಡೆಸುವುದು ಹಕ್ಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ತಪ್ಪು. ಕಾನೂನು ಕೈಗೆತ್ತಿಗೊಳ್ಳದೆ ಶಾಂತಿಯುವಾಗಿ ಪ್ರತಿಭಟನೆ ನಡೆಸಲಿ ಎಂದು ನುಡಿದರು.
ಇದನ್ನೂ ಓದಿ : ಜೆಡಿಎಸ್ ಲೋಕಸಭಾ ಚುನಾವಣೆ ಪೂರ್ವಸಿದ್ಧತಾ ಸಭೆ: ಎಲ್ಲಾ 28 ಕ್ಷೇತ್ರಗಳಲ್ಲಿ ಮೈತ್ರಿ ಅಭ್ಯರ್ಥಿಗಳ ಗೆಲ್ಲಿಸಲು ಚರ್ಚೆ