ಬೆಂಗಳೂರು: ಸರ್ಕಾರ ರಚನೆಯಲ್ಲಿ ಮುನಿರತ್ನ ಅವರ ಪಾತ್ರ ದೊಡ್ಡದಿದೆ. ಮುನಿರತ್ನ ಹಗಲು-ರಾತ್ರಿ ಜನರ ಸೇವೆ ಮಾಡುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರು ಸಚಿವ ಆಗುತ್ತಾರೆ. ಹೀಗಾಗಿ ಅತಿ ಹೆಚ್ಚು ಮತಗಳಿಂದ ಮುನಿರತ್ನ ಅವರನ್ನ ಗೆಲ್ಲಿಸಬೇಕು ಎಂದು ಪೌರಾಡಳಿತ, ತೋಟಗಾರಿಕೆ, ರೇಷ್ಮೆ ಸಚಿವ ಡಾ. ನಾರಾಯಣಗೌಡ ಮನವಿ ಮಾಡಿದರು.
ನಾಗರಭಾವಿಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಆರ್. ಆರ್. ನಗರ ಕ್ಷೇತ್ರದಲ್ಲಿರುವ ಮಂಡ್ಯ ಜಿಲ್ಲೆಯ ಜನರನ್ನ ಒಂದೆಡೆ ಸೇರಿಸಿ ಸಚಿವರು ಅವರೊಂದಿಗೆ ಸಭೆ ನಡೆಸಿದರು. ಈ ವೇಳೆ ಕಾಂಗ್ರೆಸ್ ಅಭ್ಯರ್ಥಿಯ ನಿಜ ಗುಣ ಏನೆಂದು ಜನರಿಗೆ ತಿಳಿಸಿದ ಸಚಿವರು, ಬಡ ಕುಟುಂಬದಲ್ಲಿ ಹುಟ್ಟಿದರೂ, ಕಷ್ಟ ಪಟ್ಟು ಮಗನನ್ನು ಓದಿಸಿ ಐಎಎಸ್ ಮಾಡಿಸಿದರು. ಆದ್ರೆ ಆ ವ್ಯಕ್ತಿ ಮೃತಪಟ್ಟ ಸಂದರ್ಭದಲ್ಲಿ ಅವರ ಬಳಿ ಅವರ ಪತ್ನಿ ಇರಲೇ ಇಲ್ಲ. ಆ ಬಳಿಕ ಅತ್ತೆ-ಮಾವನ್ನು ಸರಿಯಾಗಿ ನೋಡಿಕೊಳ್ಳದೆ ದೂರವಿದ್ದಾರೆ. ಸರ್ಕಾರದಿಂದ ಬಂದ ಹಣವನ್ನು ಮಾತ್ರ ತೆಗೆದಕೊಂಡರು, ಅಂತವರು ಈಗ ಆರ್. ಆರ್. ನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ. ತಮ್ಮ ಕುಟುಂಬದವರನ್ನೇ ಸರಿಯಾಗಿ ನೋಡಿಕೊಳ್ಳದವರು, ಕ್ಷೇತ್ರದ ಜನರನ್ನ ನೋಡಿಕೊಳ್ಳುತ್ತಾರಾ ಕುಸುಮಾ ಅವರ ವೈಯಕ್ತಿಕ ಬದುಕಿನ ಬಗ್ಗೆ ಪ್ರಶ್ನಿಸಿದರು. ಪಕ್ಷದ ಎಲ್ಲ ಕಾರ್ಯಕರ್ತರು ಮನೆ ಮನೆಗೆ ತೆರಳಿ ಪ್ರಚಾರ ನಡೆಸಬೇಕು ಎಂದು ಸಚಿವರು ಕರೆ ನೀಡಿದರು. ಕೇಂದ್ರದಲ್ಲಿ ಸರಿಯಾದ ನಾಯಕರೇ ಇಲ್ಲದ ಪಕ್ಷ ಕಾಂಗ್ರೆಸ್. ಬಿಜೆಪಿ ಉತ್ತಮ ಆಡಳಿತ ನೀಡುತ್ತಿದೆ. ಪ್ರಧಾನಿ ಮೋದಿ ಅವರಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಅಭಿವೃದ್ಧಿ ಕಾರ್ಯ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರ ಕೈ ಬಲಪಡಿಸಲು ಮುನಿರತ್ನ ಅವರನ್ನ ಗೆಲ್ಲಿಸಿಕೊಡಬೇಕು ಎಂದು ಮತದಾರರಲ್ಲಿ ಮನವಿ ಮಾಡಿದರು.
ಮಂಡ್ಯ ಜಿಲ್ಲೆಯಲ್ಲಿ 7ಕ್ಕೆ ಏಳೂ ಕ್ಷೇತ್ರವನ್ನ ಗೆಲ್ಲಿಸಿಕೊಟ್ಟರೂ ಯಾವುದೇ ರೀತಿ ಅಭಿವೃದ್ಧಿ ಮಾಡಿಲ್ಲ. 7 ಸಾವಿರ ಕೋಟಿ ಅಲ್ಲ, 70 ಕೋಟಿ ರೂಪಾಯಿಯನ್ನೂ ಕೊಟ್ಟಿಲ್ಲ. ಆ ಕಾರಣಕ್ಕಾಗಿಯೇ ನಾವೆಲ್ಲ ಒಟ್ಟಾಗಿ ಬಿಜೆಪಿಗೆ ಬಂದು ಅಭಿವೃದ್ಧಿಗೆ ಕೈ ಜೋಡಿಸಿದ್ದೇವೆ. ಈಗ ಶಿರಾ ಹಾಗೂ ಆರ್. ಆರ್. ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವೆಂದು ಸಚಿವ ಡಾ.ನಾರಾಯಣ ಗೌಡ ಭವಿಷ್ಯ ನುಡಿದರು.
ಸಭೆಯಲ್ಲಿ ತುರುವೆಕೆರೆ ಶಾಸಕ ಜಯರಾಮ್, ವಿಧಾನ ಪರಿಷತ್ ಸದಸ್ಯ ಅ. ದೇವೇಗೌಡ, ಮನ್ಮುಲ್ ನಿರ್ದೇಶಕ ಸ್ವಾಮಿ ಗೌಡ, ಜಿ.ಪಂ. ಸದಸ್ಯ ಶಿವಣ್ಣ ಸೇರಿದಂತೆ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.