ಬೆಂಗಳೂರು : ಶಾಸಕ ಹಾಗೂ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ’’ನೀವು ಬಾಯಿ ಮುಚ್ಚಿ, ಇಲ್ಲವಾದರೆ ನಾಲಗೆ ಕೀಳಬೇಕಾಗುತ್ತದೆ ಹುಷಾರ್. ಪಕ್ಷದ ಬಗ್ಗೆ ಗೌರವ ಇಲ್ಲ ಎಂದರೆ ಇಲ್ಲಿ ಏಕೆ ಇದಿಯಾ?, ದೊಂಬರಾಟ ಸಾಕಾಗಿದೆ’’ ಎಂದು ಯತ್ನಾಳ್ ವಿರುದ್ಧ ನಿರಾಣಿ ಆಕ್ರೋಶ ವ್ಯಕ್ತಪಡಿಸಿದರು.
ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಜತೆ ಬೆಂಗಳೂರಿನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸುಮ್ಮನೆ ಇದ್ದರೆ ಮೌನಂ ಸಮ್ಮತಿ ಲಕ್ಷಣಂ ಅಂದುಕೊಳ್ಳುತ್ತಾರೆ. ಅದಕ್ಕೆ ಮಾತನ್ನಾಡುತ್ತಿದ್ದೇನೆ. ನೀನು ಜೆಡಿಎಸ್‌ಗೆ ಹೋದಾಗ ಅಲ್ಲಿನೂ ಹಾಗೇ ಮಾತನ್ನಾಡುತ್ತಿಯಾ. ಬಿಜೆಪಿಯಲ್ಲಿದ್ದಾಗ ಟಿಪ್ಪು ಬಗ್ಗೆ ಬಾಯಿಗೆ ಬಂದ ಹಾಗೇ ಮಾತನ್ನಾಡುತ್ತಿಯಾ. ಏನು ಅಂದುಕೊಂಡಿಯಾ? ಇಷ್ಟ ಇದ್ದರೆ ಇಲ್ಲಿ ಇರು. ಇಲ್ಲವಾದರೆ ರಾಜೀನಾಮೆ ಕೊಟ್ಟು ಹೊರಗೆ ಹೋಗು ಎಂದು ನೇರವಾಗಿಯೇ ಯತ್ನಾಳ್ಗೆ ಸವಾಲು ಹಾಕಿದರು.
’’ಯತ್ನಾಳ್ ಒಡೆದು ಆಳುವ ರಾಜಕಾರಣ ಮಾಡುತ್ತಿದ್ದಾರೆ. ಪಂಚಮಸಾಲಿ ಮೀಸಲಾತಿಗೆ ಮುಂಚೂಣಿಯಲ್ಲಿ ಹೋರಾಡುತ್ತಿರುವವರಿಂದ ಈ ಕಾರ್ಯ ಆಗುತ್ತಿದೆ ಎಂದು ಹೇಳಲು ಬಯಸುತ್ತೇನೆ. ನಮ್ಮ ವಿಜಯಪುರದವನು ಒಬ್ಬನಿದ್ದಾನೆ. ಎಲುಬಿಲ್ಲದ ನಾಲಿಗೆ. ದೀಪ ಆರುವಾಗ ಹೆಚ್ಚು ಬೆಳಕು ಕೊಡುತ್ತದೆ ಎಂಬ ಮಾತಿದೆ. ನಮ್ಮ ಬಿಜೆಪಿ ಹಿರಿಯರು ಹೇಗೆ ಮಾತನಾಡಬೇಕು ಹೇಗೆ ಸಂಬಂಧ ಹೊಂದಿರಬೇಕು ಎನ್ನುವುದನ್ನು ಕಲಿಸಿರುತ್ತಾರೆ. ಆದರೆ ಯತ್ನಾಳ್ ಯಾವ ರೀತಿ ನಾಲಿಗೆ ಹರಿಬಿಟ್ಟು ಮಾತನಾಡುತ್ತಿದ್ದಾರೆ ಎಂದರೆ ಯಾರಿಗೋ ಹುಟ್ಟಿದವರು ಮಾತ್ರ ಈ ರೀತಿ ಮಾತನಾಡಲು ಸಾಧ್ಯ‘‘ ಎಂದು ಟೀಕಿಸಿದರು.
ಇದು ಮುಂದುವರೆದರೆ ನಾಲಿಗೆ ಕತ್ತರಿಸಬೇಕಾಗುತ್ತದೆ : ’’ಪಿಂಪ್ ಎನ್ನುವ ಪದ ಬಳಸಿದ್ದಾರಲ್ಲಾ, ಅವರೇ ಇಂತಹ ಕೆಲಸ ಮಾಡಿರಬಹುದು. ಸುಸಂಸ್ಕೃತ ಕುಟುಂಬ, ಮಾರ್ಗದರ್ಶನ, ಕುಟುಂಬದವರಿಂದ ಬಂದವರಿಗೆ ಇಂತಹ ಶಬ್ಧ ಬರುವುದಿಲ್ಲ. ಇಂತಹ ಶಬ್ಧ ಬಳಸುತ್ತಿದ್ದಾರೆ ಅಂದರೆ ಅವರೇ ಪಿಂಪ್ ಆಗಿರಬೇಕು. ನಾನು ಕಠೋರವಾಗಿ ಮಾತನಾಡುತ್ತಿದ್ದೇನೆ. ಮುಂದುವರಿದರೆ ನಾಲಿಗೆ ಕತ್ತರಿಸಬೇಕಾಗಿ ಬರಲಿದೆ. ಅಲ್ಲದೇ ಸಿಡಿ ವಿಚಾರವಾಗಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೀರಿ. ನಿಮ್ಮ ಅಪ್ಪನಿಗೆ ಹುಟ್ಟಿದ್ದರೆ ಮೊದಲು ಅದನ್ನು ತೆರವುಗೊಳಿಸಿ ನೋಡೋಣ‘‘ ಎಂದು ನಿರಾಣಿ ಟೀಕಾಪ್ರಹಾರ ನಡೆಸಿದರು.
ಕಾರು ಚಾಲಕನ ಸಾವು ಕೆದಕಿದ ನಿರಾಣಿ : ನಿಮ್ಮ ಈಗಿನ ಕಾರು ಚಾಲಕನ ಸಂಬಂಧಿಯೊಬ್ಬ ಈ ಹಿಂದೆ ನಿಮ್ಮದೇ ಕಾರಿನ ಚಾಲಕನಾಗಿದ್ದ. ಅವನ ಕೊಲೆಯಾಗಿದೆ. ಅವನ ಕೊಲೆ ಯಾರು ಮಾಡಿದ್ದಾರೆ?. ಕುಮಾರ್ ಎಂಬ ವ್ಯಕ್ತಿಯ ಕೊಲೆ ಯಾಕಾಯಿತು? ಹೇಗಾಯಿತು ? ಯಾರು ಮಾಡಿದರು ಎಂದು ಹೇಳಿ ಎಂದು ಕಾರು ಚಾಲಕನ ಸಾವಿನ ವಿಚಾರವನ್ನು ನಿರಾಣಿ ಹೊರಹಾಕಿದರು.
’’ನಿಮ್ಮದು ಡ್ರಾಮಾ ಮಾಡುವ ಕಂಪನಿ. ಒಂದೊಂದು ಪಕ್ಷಕ್ಕೆ ಹೋದಾಗ ಒಂದೊಂದು ರೀತಿ ನಡೆದುಕೊಂಡಿದ್ದೀರಿ. ಇಲ್ಲಿವರೆಗೆ ಪಕ್ಷ, ಸರ್ಕಾರ ಸಹನೆಯಿಂದ ಇದ್ದಾರೆ. ಸುಮ್ಮನಾಗಿ ಉಳಿದಿಲ್ಲ ಅಂದರೆ ಪರಿಸ್ಥಿತಿ ಸರಿ ಇರಲ್ಲ. ಮೇಲಿಂದ ಟಿಕೆಟ್ ತೆಗೆದುಕೊಂಡು ಬರುತ್ತೇನೆ ಎಂಬ ಉಡಾಫೆ ಬೇಡ. ಪಕ್ಷದ ಮೇಲೆ ಗೌರವ ಇಲ್ಲ ಎಂದ ಮೇಲೆ ಈ ಪಕ್ಷದಲ್ಲಿ ಏಕೆ ಇರುತ್ತೀಯಾ! ರಾಜೀನಾಮೆ ಕೊಟ್ಟು ಹೋಗಿ ಬೇರೆ ನಿಂತು ಗೆದ್ದು ನೋಡು. ಇದೇ ಸ್ಥಿತಿ ಮುಂದುವರಿದರೆ ಕ್ಷೇತ್ರದ ಜನ, ಬಿಜೆಪಿಯವರು ತಕ್ಕ ಪಾಠ ಕಲಿಸುತ್ತಾರೆ’’ ಎಂದು ಎಚ್ಚರಿಸಿದರು.
ಸಿಎಂ ಪ್ರತಿಕೃತಿ ದಹಿಸಿದ್ದು ಸರಿಯಲ್ಲ: ಸಚಿವ ಸಿ.ಸಿ.ಪಾಟೀಲ್ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ಹೋರಾಟ ವಿಚಾರ ಮಾತನಾಡಿ, ’’ಸಿಎಂ ಪ್ರತಿಕೃತಿ ದಹಿಸಿದ್ದು ಸರಿಯಲ್ಲ. ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ನಡೆ ಸರಿಯಲ್ಲ. ನೀವು ಕಾಂಗ್ರೆಸ್ ಜೊತೆಗೂಡಿ ಮಾಡಿದ್ದು ಸರಿಯಲ್ಲ. ಅದನ್ನು ನಾವು ಖಂಡಿಸುತ್ತೇವೆ. ವಿನಯ್ ಕುಲಕರ್ಣಿ, ಕಾಶಪ್ಪನವರ್ ಹಾಗೂ ಯತ್ನಾಳ್ ಜೊತೆ ಸೇರಿ ಹೀಗೆ ಮಾಡಬಾರದಿತ್ತು‘‘ ಎಂದರು.
’’ಸಿದ್ಧರಾಮಯ್ಯರ ಬಳಿ 2ಎ ಏಕೆ ಮಾತನಾಡಿಲ್ಲ ? ಈಗ ಶುರು ಮಾಡಿದ್ದಾರೆ. ಎಷ್ಟು ಬಾರಿ ಮುತ್ತಿಗೆ ಹಾಕುವುದು ಶ್ರೀಗಳು? ಇದನ್ನು ನಾವು ಒಪ್ಪಲು ಸಾಧ್ಯವಿಲ್ಲ. ಹಿಂದುಳಿದ ವರ್ಗಗಳ ಸಂಪೂರ್ಣ ವರದಿ ಬಂದ ಬಳಿಕ ಎಲ್ಲವೂ ನಿರ್ಧಾರ ಆಗುತ್ತದೆ. ಸಿದ್ಧರಾಮಯ್ಯ ಮಾಡದ ಕೆಲಸ ಈಗ ಬಸವರಾಜ ಬೊಮ್ಮಾಯಿ ಮಾಡುತ್ತಿದ್ದಾರೆ. ಯತ್ನಾಳ್, ಕಾಶಪ್ಪನವರ್ ಇದನ್ನು ಸ್ವಾಗತಿಸಬೇಕಿತ್ತು. ಶಾಂತ ರೀತಿಯಲ್ಲಿ ಇರಬೇಕು‘‘ ಎಂದು ನಿರಾಣಿ ಇದೇ ವೇಳೆ ಮನವಿ ಮಾಡಿಕೊಂಡರು.
ಶಿಗ್ಗಾವಿಯಲ್ಲಿ ನಡೆದ ಪ್ರತಿಭಟನೆಯನ್ನು ಖಂಡಿಸುತ್ತೇನೆ : ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ವಿಫಲರಾಗಿದ್ದಾರೆ ಎಂದು ಆರೋಪಿಸಿ ನಿನ್ನೆ ಶಿಗ್ಗಾವಿಯಲ್ಲಿ ಪ್ರತಿಭಟನೆ ನಡೆಸಲಾಗಿದೆ. ರಾಣಿ ಚೆನ್ನಮ್ಮ ವೃತ್ತದಲ್ಲಿ ಧರಣಿ ನಡೆಸಿ, ಹೈವೇ ಬಂದ್ ಮಾಡಿ, ಪ್ರತಿಕೃತಿ ದಹನ ಮಾಡಿದ್ದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷದ ನಾಯಕರಾದ ವಿಜಯಾನಂದ ಕಾಶಪ್ಪನವರ್, ವಿನಯ್ ಕುಲಕರ್ಣಿ ಅವರೊಂದಿಗೆ ಶ್ರೀ ಜಯಮೃತ್ಯುಂಜ ಸ್ವಾಮೀಜಿ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಕೈಜೋಡಿಸಿರುವುದು ಸರಿಯಲ್ಲ. ಇದನ್ನು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ಇದ್ದಾಗ ಪಂಚಮಸಾಲಿ ಸಮಾಜಕ್ಕೆ 2ಎ ಕೊಡಬಾರದು ಎಂದು ನಿರ್ಣಯ ಕೈಗೊಂಡಿದ್ದರೋ, ಅವರ ಜತೆ ಸೇರಿ ಹೋರಾಡಿದ್ದು ಸರಿಯಲ್ಲ ಎಂದರು.
ಜಯಮೃತ್ಯುಂಜಯ ಶ್ರೀಗಳಿಗೆ ಪದೇ ಪದೆ ಗಡುವುದು ಕೊಡುವುದು ಹಾಗೂ ಹೋರಾಟಕ್ಕೆ ಇಳಿಯುವುದು ಹವ್ಯಾಸವಾಗಿ ಬಿಟ್ಟಿದೆ. 2ಎ ಮೀಸಲಾತಿಗೆ ಸಂಬಂಧಿಸಿದಂತೆ ಗೃಹ ಸಚಿವರಾಗಿದ್ದಾಗ, ಸಿಎಂ ಆದ ನಂತರ ನೀಡಿದ ಸಹಕಾರವನ್ನು ಸ್ವಾಮೀಜಿ ಮನಗಾಣಬೇಕು. ಭರವಸೆ ಪಡೆದ ನಂತರ ಹೋರಾಡುವುದು ಸರಿಯಲ್ಲ. ನಾವು ಸಚಿವರು ಸಹ ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದೇವೆ. ಸಂವಿಧಾನಾತ್ಮಕ ಚೌಕಟ್ಟಿನಲ್ಲಿ ಹಾಗೂ ಉಳಿದ ಜನಾಂಗದವರ ಬಗೆಗೂ ಗಮನ ಹರಿಸಬೇಕಾಗುತ್ತದೆ ಎಂದು ಸಚಿವರು ಹೇಳಿದರು.
ಆದರೂ ಸಿಎಂ ಬೊಮ್ಮಾಯಿ ಈ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಹಿಂದೆ ಕುಮಾರಸ್ವಾಮಿ ಸರ್ಕಾರ ಇದ್ದಾಗ ಜಯಮೃತ್ಯುಂಜಯ ಸ್ವಾಮೀಜಿ ಒಂದು ಮಾತು ಕೇಳಿರಲಿಲ್ಲ. ಈಗ ಈ ವಿಚಾರ ಪ್ರಸ್ತಾಪಿಸುತ್ತಿದ್ದಾರೆ. ಸಿಎಂ ಪ್ರಯತ್ನ ಫಲಕ್ಕೆ ಸಿಗುವ ಹಂತದಲ್ಲಿರುವಾಗ ರಾಜಕೀಯ ಪ್ರೇರಿತ ಮನೆಗೆ ಮುತ್ತಿಗೆ, ಹೋರಾಟ ಮಾಡುವುದು ಸರಿಯಲ್ಲ. ಸ್ವಾಮೀಜಿ ಈ ರೀತಿ ಮಾಡುವುದರಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆ ಆಗಲಿದೆ.
ನಾವು ಸಹ ಸಮುದಾಯದವರಿಗೆ ಮನವಿ ಮಾಡುತ್ತಿದ್ದು, ಶಾಂತರೀತಿಯಿಂದ ಇರುವಂತೆ ಕೋರುತ್ತೇನೆ. ಹೋರಾಟಗಾರರು ಸಹ ಈ ವಿಚಾರದಲ್ಲಿ ಗಮನಿಸಬೇಕು. ಅವರ ನಿನ್ನೆಯ ಹೋರಾಟ ಖಂಡಿಸುತ್ತೇನೆ. 2ಎ ಮೀಸಲಾತಿ ಪಂಚಮಸಾಲಿಗಳಿಗೆ ಸಿಎಂ ಕೊಡುತ್ತಾರೆ ಎಂಬ ಭರವಸೆ ನಮಗಿದೆ. ಜನ ಶಾಂತ ರೀತಿಯಿಂದ ಇರಬೇಕೆಂದು ಕೋರುತ್ತೇನೆ ಎಂದರು.
ಇದನ್ನೂ ಓದಿ :ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಕಾಂಗೆ ನೀಡಿದ್ದು ಎಷ್ಟು ಕೋಟಿ?: ಲೆಕ್ಕ ಕೊಡಿ ಎಂದ ಸಿದ್ದರಾಮಯ್ಯ