ಬೆಂಗಳೂರು : ಕಳೆದ ಮೂರು ತಿಂಗಳಿನಿಂದ ವಲಸಿಗರನ್ನು ಸೆಳೆಯುವ ಪ್ರಯತ್ನವನ್ನು ಕಾಂಗ್ರೆಸ್ ಮಾಡುತ್ತಿದೆ ಎಂದು ತೋಟಗಾರಿಕೆ ಸಚಿವ ಮುನಿರತ್ನ ಗಂಭೀರ ಆರೋಪ ಮಾಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಪರೇಷನ್ ಹಸ್ತಕ್ಕೆ ಕಾಂಗ್ರೆಸ್ ಪಕ್ಷದವರ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಎಲ್ಲರ ಜೊತೆಗೆ ಸಂಪರ್ಕ ಮಾಡುತ್ತಿದ್ದಾರೆ. ಕಳೆದ ಮೂರು ತಿಂಗಳಿಂದ ಸತತ ಪ್ರಯತ್ನ ನಡೆದಿದೆ. ಆದರೆ ನಾವು ನಿಮ್ಮ ಜೊತೆ ಬರಲ್ಲ ಎಂದು ಅವರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ನಿಮ್ಮ ಸಹವಾಸ ಬೇಡ. ನಾವು ಬಿಜೆಪಿ ಪಾರ್ಟಿ ಬಿಟ್ಟು ಬರುವ ಪ್ರಶ್ನೆಯೇ ಇಲ್ಲ ಎಂದು ಎಲ್ಲರೂ ಹೇಳುತ್ತಿದ್ದೇವೆ. ಆದರೂ ಸಹ ನಾವು ಬಾಗಿಲು ತೆರೆದಿದ್ದೇವೆ ಬನ್ನಿ, ನಿಮಗೋಸ್ಕರ ಕಾಯುತ್ತಿದ್ದೇವೆ ಬನ್ನಿ, ಪ್ರಯತ್ನಗಳು ನಡೆಯುತ್ತಲೇ ಇದೆ ಎಂದು ಆರೋಪಿಸಿದರು.
ಬಿಜೆಪಿ ಬಿಡುವ ಪ್ರಶ್ನೆ ಇಲ್ಲ-ಮುನಿರತ್ನ : ನನ್ನ ಕ್ಷೇತ್ರದಲ್ಲಿ ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿ ಘೋಷಣೆ ಮಾಡಿದ್ದಾರೆ. ನನಗೆ ಯಾವುದೇ ಸಂಬಂಧ ಇಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಬಿಡುತ್ತೇನೆ ಹೊರತು, ಬಿಜೆಪಿ ಬಿಡುವುದು ಅಥವಾ ಬೇರೆ ಪಕ್ಷಕ್ಕೆ ಹೋಗಲ್ಲ ಎಂದ ಮುನಿರತ್ನ ಅವರು, 17 ಜನರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಇವರು ಇದ್ದಿದ್ದರೆ ಸರ್ಕಾರ ಮಾಡುತ್ತಿದ್ದೆವು ಎನ್ನುತ್ತಿದ್ದರು. ನಾವು ಇದ್ದಾಗ ಬೆಲೆ ಗೊತ್ತಿರಲಿಲ್ಲ, ಕಾಲಕಸದ ರೀತಿಯಲ್ಲಿ ನೋಡಿಕೊಂಡರು. ಇದ್ದಾಗ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಅವತ್ತಿನ ಮಾತುಗಳೇನು, ಅವತ್ತು ಸರಿಯಾಗಿ ನಡೆಸಿಕೊಂಡಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ ಎಂದು ಕಿಡಿಕಾರಿದರು.
ಅಭಿಮಾನದಿಂದ ನಡೆದುಕೊಳ್ಳುತ್ತಿದ್ದೇವೆ: ಬಿಜೆಪಿ ನಮ್ಮನ್ನು ಗೌರವಯುತವಾಗಿ ನೋಡಿಕೊಳ್ಳುತ್ತಿದೆ. ಪ್ರೀತಿ ಅಭಿಯಾನದಿಂದ ನೋಡಿಕೊಳ್ಳುತ್ತಿದೆ. ನಾವು ಅವರೊಂದಿಗೆ ಅಭಿಮಾನದಿಂದ ನಡೆದುಕೊಳ್ಳುತ್ತಿದ್ದೇವೆ. ಅವರ ಪ್ರೀತಿಯ ಮಾತು ಇದೆಯಲ್ಲ, ಅಷ್ಟೇ ನಮಗೆ ಸಾಕಾಗಿದೆ. ಯಾವುದೇ ಕಾರಣಕ್ಕೂ ಪಕ್ಷ ತೊರೆಯಲ್ಲ ಎಂದರು.
ಇದನ್ನೂ ಓದಿ : ಡಿಕೆಶಿ, ಎಸ್‍ಡಿಪಿಐ ಮುಖಂಡನ ವಿರುದ್ಧ ಮುಖ್ಯ ಚುನಾವಣಾಧಿಕಾರಿಗೆ ಬಿಜೆಪಿ ದೂರು
ಇಲಾಖೆಯ ಸಾಧನೆಗಳನ್ನು ತೆರೆದಿಟ್ಟ ಸಚಿವರು : ತಮ್ಮ ಇಲಾಖೆಯ ಸಾಧನೆಗಳನ್ನು ತೆರೆದಿಟ್ಟ ಸಚಿವ ಮುನಿರತ್ನ, ಯಲಹಂಕದಲ್ಲಿ ನಾಡಪ್ರಭು ಕೆಂಪೇಗೌಡರ ಉದ್ಯಾನವನ ನಿರ್ಮಾಣದ ಗದ್ದಲಿ ಪೂಜೆಯನ್ನು ವರ್ಚುವಲ್ ಮೂಲಕ ಪೂರ್ಣಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು. ನೀತಿ ಸಂಹಿತೆ ಜಾರಿಯಾಗಿರುವುದರಿಂದ ಸ್ಥಳಕ್ಕೆ ಹೋಗಿ ಗುದ್ದಲಿ ಪೂಜೆ ಮಾಡಲು ಸಾಧ್ಯವಾಗದಿದ್ದರಿಂದ ವರ್ಚುವಲ್ ಮೂಲಕ ಪೂರ್ಣಗೊಳಿಸಿದ್ದೇವೆ ಎಂದರು.
ತೋಟಗಾರಿಕೆ ಇಲಾಖೆಯಿಂದ ರೈತರಿಗೆ ಸೂಕ್ತ ಸ್ಪಂದನೆಯನ್ನು ನೀಡಲಾಗಿದೆ. ಈ ಇಲಾಖೆಯಲ್ಲಿ ಕೆಲಸ ಮಾಡಿದ್ದು ತೃಪ್ತಿ ಇದೆ. ಈ ದಿನ ಇತಿಹಾಸದಲ್ಲಿ ಉಳಿದುಕೊಳ್ಳಲಿದೆ. ಲಾಲ್ಬಾಗ್ ಹಾಗೂ ಕಬ್ಬನ್ ಪಾರ್ಕ್ಗಿಂತ ದೊಡ್ಡದಾದ ಎರಡು ಪಾರ್ಕ್ಗಳು ಬರುತ್ತಿವೆ. 75 ವರ್ಷದಲ್ಲಿ ಯಾರೂ ಮಾಡಲಾಗದ ಸಾಧನೆ ನಮ್ಮ ಇಲಾಖೆ ಮಾಡಿದೆ ಎಂದು ತಿಳಿಸಿದರು.
ಇದನ್ನೂ ಓದಿ : ಮುಂದೆ ನಮ್ಮದೇ ಸರ್ಕಾರ ಬರುತ್ತೆ, ಕಾಂಗ್ರೆಸ್ಅನ್ನು ಕಿತ್ತು ಹಾಕುತ್ತೇವೆ : ಸಚಿವ ಆರ್ ಅಶೋಕ್