ಬೆಂಗಳೂರು: ಖಾತೆ ಬದಲಾವಣೆ, ಅಸಮಾಧಾನದ ಬಳಿಕ ಪೌರಾಡಳಿತ ಸಚಿವ ಎಂ.ಟಿ.ಬಿ.ನಾಗರಾಜ್ ಇಂದು ಕಚೇರಿ ಪೂಜೆ ನೆರವೇರಿಸಿದರು.
ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಕಚೇರಿಯಲ್ಲಿ ಇಂದು ಬೆಳಗ್ಗೆ ಪೂಜೆ ಮಾಡುವ ಮೂಲಕ ಕಚೇರಿ ಪ್ರವೇಶಿಸಿದರು. ಈ ಸಂದರ್ಭದಲ್ಲಿ ಪತ್ನಿ ಸೇರಿದಂತೆ ಕುಟುಂಬ ಸದಸ್ಯರು ಭಾಗಿಯಾಗಿದ್ದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಸಮಾಧಾನದಿಂದ ಪೂಜೆ ಮಾಡಿಯೇ ಕೆಲಸ ಪ್ರಾರಂಭ ಮಾಡಿದ್ದೇನೆ. ಈ ಹಿಂದೆ ವಸತಿ ಇಲಾಖೆ ಕೇಳಿದ್ದು ನಿಜ. ಆದರೆ, ಕಾರಣಾಂತರಗಳಿಂದ ಅದನ್ನು ಸಿಎಂ ನನಗೆ ಕೊಡೋಕೆ ಆಗಿಲ್ಲ. ಆದರೆ ಈಗ ಪೌರಾಡಳಿತ ಹಾಗೂ ಸಕ್ಕರೆ ಖಾತೆ ಕೊಟ್ಟಿದ್ದಾರೆ. ಈ ಖಾತೆಗಳನ್ನು ಸಮರ್ಥವಾಗಿ ನಿಭಾಯಿಸುತ್ತೇನೆ.ಈ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಒಳ್ಳೆ ಹೆಸರು ತರುವುದಾಗಿ ಹೇಳಿದರು.
ಪಕ್ಷದ ತೀರ್ಮಾನಕ್ಕೂ ನಾವೆಲ್ಲರೂ ಬದ್ಧರಾಗಿರುತ್ತೇವೆ. ಬೆಂಗಳೂರು ಗ್ರಾಮಾಂತರ ಉಸ್ತುವಾರಿ ಕೊಟ್ಟರೆ ನಿಭಾಯಿಸುತ್ತೇನೆ. ನಾನು ಹೊಸಕೋಟೆ ಕ್ಷೇತ್ರದವನು, ಉಸ್ತುವಾರಿ ಕೊಡಿ ಅಂತಾ ಡಿಮ್ಯಾಂಡ್ ಮಾಡಿಲ್ಲ. ಈ ಖಾತೆ ಬೇಕು ಎಂದು ಮುಖ್ಯಮಂತ್ರಿಗಳ ಬಳಿ ಕೇಳಿಲ್ಲ. ಆದರೆ, ಮುಂದೆ ಈ ಬಗ್ಗೆ ಮುಖ್ಯಮಂತ್ರಿಗಳು ತೀರ್ಮಾನ ಮಾಡುತ್ತಾರೆ ಎಂದು ಪರೋಕ್ಷವಾಗಿ ಬೆಂಗಳೂರು ಗ್ರಾಮಾಂತರ ಉಸ್ತುವಾರಿಯಾಗಲು ಇಂಗಿತ ವ್ಯಕ್ತಪಡಿಸಿದರು.
ಓದಿ: ಮೂವರು ಸಚಿವರ ಖಾತೆ ಮರು ಹಂಚಿಕೆ: ಸುಧಾಕರ್‌ಗೆ ಮತ್ತೆ ವೈದ್ಯಕೀಯ ಶಿಕ್ಷಣ ಖಾತೆ?
ಹಿರಿಯ ಮುಖಂಡ ಹೆಚ್. ವಿಶ್ವನಾಥ್ ಅವರಿಗೆ ಸ್ವಲ್ಪ ಬೇಸರ ಇದೆ. ಇಂತಹ ಸಂದರ್ಭದಲ್ಲಿ ಬೇಸರ ಆಗೋದು ಸಹಜ. ಆದರೆ, ಮುಂದಿನ ದಿನಗಳಲ್ಲಿ ಅದೆಲ್ಲವೂ ಸರಿಯಾಗಲಿದೆ. ಸಿಎಂ ಯಡಿಯೂರಪ್ಪ ಎಲ್ಲಾ ಸರಿಪಡಿಸುತ್ತಾರೆ ಎಂಬ ವಿಶ್ಚಾಸ ಇದೆ ಎಂದರು.
ಮಿತ್ರ ಮಂಡಳಿಯಲ್ಲಿ ಯಾವುದೇ ಬಿರುಕು ಇಲ್ಲ. ಯಾವುದೇ ಅಸಮಾಧಾನವೂ ಇಲ್ಲ. ನಾವೆಲ್ಲರೂ ಸಮಧಾನವಾಗಿಯೇ ಇದ್ದೇವೆ ಎಂದು ಸ್ಪಷ್ಟಪಡಿಸಿದರು.