ಬೆಂಗಳೂರು : ಕೆಲವು ದಿನಗಳಿಂದ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಾಂಗ್ರೆಸ್ ನಾಯಕರು ಮುಗಿಬೀಳುತ್ತಿದ್ದಾರೆ. ಇದೀಗ ಭಾರಿ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ. ಬಿ. ಪಾಟೀಲ್ ಅವರು, ಪ್ರತಾಪ್ ಸಿಂಹಗೆ ತಲೆ ಕೆಟ್ಟಿದೆ. ಪ್ರತಾಪ ಸಿಂಹ ಅವರದ್ದು ಚಿಲ್ಲರೆ ಮನಸ್ಥಿತಿ ಎಂದು ಟೀಕಿಸಿದ್ದಾರೆ. ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯನವರು ಎಂ.ಬಿ ಪಾಟೀಲ್ ಹೆಗಲ ಮೇಲೆ ಬಂದೂಕು ಇಟ್ಟು ಡಿಸಿಎಂ ಡಿ ಕೆ ಶಿವಕುಮಾರ್ಗೆ ಶೂಟ್ ಮಾಡಿದ್ದಾರೆ ಎಂಬ ಪ್ರತಾಪ್ ಸಿಂಹ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
"ನನ್ನ ಹಾಗೂ ಡಿ ಕೆ ಶಿವಕುಮಾರ್ ಸಂಬಂಧ ಚೆನ್ನಾಗಿದೆ. ಪಕ್ಷದ ಮಟ್ಟದಲ್ಲಿ ನಮ್ಮದೇ ಆದ ಭಿನ್ನಾಭಿಪ್ರಾಯಗಳು ಇರಬಹುದು. ಇಲ್ಲಾ ಅಂತ ನಾನು ಹೇಳಲ್ಲ. ಅದು ಪಕ್ಷದ ಒಳಗಡೆ ಮಾತ್ರ, ಅದರ ಹೊರತಾಗಿ ನಮ್ಮ ಸಂಬಂಧ ಚೆನ್ನಾಗಿದೆ. ಸಿದ್ದರಾಮಯ್ಯ ಇನ್ಯಾರದೋ ಹೆಗಲ ಮೇಲೆ ಬಂದೂಕು ಇಟ್ಟು ಶೂಟ್ ಮಾಡುವಂತವರಲ್ಲ. ನಾನು ಅಷ್ಟೇ, ಏನೇ ಇದ್ರೂ ಡೈರೆಕ್ಟ್ ಆಗಿಯೇ ಹೊಡೆಯುತ್ತೇನೆ. ನನಗೂ ಆ ತಾಕತ್ತಿದೆ" ಎಂದು ಕಿಡಿಕಾರಿದ್ದಾರೆ.
"ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿ ಮುಂದುವರಿಯುವ ವಿಚಾರವಾಗಿ ಹಿಂದೆ ನಾನು ಏನು ಹೇಳಿದ್ದೇನೊ ಅದಕ್ಕೆ ನಾನು ಈಗಾಗಲೇ ಕ್ಲಾರಿಫಿಕೇಶನ್ ಕೊಟ್ಟಿದ್ದೇನೆ. ಅದರ ಬಗ್ಗೆ ಈಗ ಮತ್ತೆ ಮಾತನಾಡಲ್ಲ. ಸಚಿವ ಮಹದೇವಪ್ಪ ಹೇಳಿಕೆ ವಿಚಾರ ಅವರಿಗೆ ಬಿಟ್ಟಿದ್ದು. ಅವರ ಹೇಳಿಕೆ ಬಗ್ಗೆಯೂ ನಾನು ಮಾತನಾಡುವುದಿಲ್ಲ. ಅದನ್ನ ಅವರ ಬಳಿಯೇ ಕೇಳಿ" ಎಂದು ಎಂ. ಬಿ. ಪಾಟೀಲ್ ಹೇಳಿದರು.
ಸಂಚಿವ ಸಂಪುಟ ಸಂದರ್ಭದಲ್ಲಿ ಅಧಿಕಾರ ಹಂಚಿಕೆ ವಿಚಾರದ ಬಗ್ಗೆ ಹೈಕಮಾಂಡ್ ಯಾವ ಸೂಚನೆಯನ್ನೂ ಕೊಟ್ಟಿಲ್ಲ. ಅವತ್ತು ಕೆ.ಸಿ ವೇಣುಗೋಪಾಲ್ ಪ್ರೆಸ್ ಮೀಟ್ ನಲ್ಲಿ ಏನು ಹೇಳಿದ್ರೋ ಅಷ್ಟೇ ನಮಗೂ ಮಾಹಿತಿ ಇರುವುದು. ಈ ಬಗ್ಗೆ ಮಾತಾಡಬಾರದು ಅಂತ ಹೈಕಮಾಂಡ್ ಯಾವ ಡೈರೆಕ್ಷನ್ನೂ ಕೊಟ್ಟಿಲ್ಲ ಎಂದು ಪ್ರತಾಪ್ ಸಚಿವ ಎಂ ಬಿ ಪಾಟೀಲ್ ವಿವರಿಸಿದರು.
ಇನ್ನು ಅಕ್ಕಿ ವಿಚಾರದಲ್ಲಿ ಕೇಂದ್ರ ಸರ್ಕಾರದ ಅಸಹಕಾರ ವಿಚಾರ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರವಾಗಿ ಪ್ರಯತ್ನ ಮಾಡುತ್ತಿದ್ದಾರೆ. ಛತ್ತೀಸ್ಗಢದಿಂದ ಅಕ್ಕಿ ಖರೀದಿಗೆ ಸಿದ್ಧವಾಗಿದ್ದೇವೆ. ಕೇಂದ್ರ ಸರ್ಕಾರ ಅಕ್ಕಿ ವಿಚಾರದಲ್ಲಿ ಸೇಡಿನ ರಾಜಕೀಯ ಮಾಡುತ್ತಿದೆ. ಪುಕ್ಕಟೆ ಅಕ್ಕಿ ಕೊಡೋದು ಬೇಡ. ಈ ಬಗ್ಗೆ ಬಿಜೆಪಿ ಸಂಸದರು ಮಾತನಾಡಲಿ, ಅವರಿಗೆ ಸದ್ಬುದ್ಧಿ ನೀಡಲಿ ಎಂದರು.
ನಂತರ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಟ್ವೀಟ್ ವಿಚಾರ ಮಾತನಾಡಿ, ಯಾವುದೇ ಗ್ರೂಪ್ ಇರಲಿ. ಕೈಗಾರಿಕೋದ್ಯಮಿಗಳ ಸಭೆ ಕರೆಯಲಾಗಿತ್ತು. ಅವರು ಸಲಹೆ-ಸೂಚನೆ ನೀಡಿದರು. ನಾನು ಪಾರದರ್ಶಕವಾಗಿ ಉದ್ಯಮ ಸ್ಥಾಪಿಸುವವರಿಗೆ ಸ್ವಾಗತ ಅಂತ ಹೇಳಿದ್ದೆ. ರಾಜ್ಯ ಕೈಗಾರಿಕೆಯಲ್ಲಿ ಉನ್ನತ ಸ್ಥಾನ ಗಳಿಸಲಿದೆ. ಏಕಗವಾಕ್ಸಿ ಯೋಜನೆ ಬಗ್ಗೆ ಚರ್ಚೆ ಆಗಿದೆ. 7 ವಲಯಗಳನ್ನ ಕೈಗಾರಿಕೆಗೆ ಗುರುತಿಸಲಾಗಿದ್ದು, ಮಾಹಿತಿ ಕಲೆ ಹಾಕಲಾಗುತ್ತಿದೆ. ಬೆಂಗಳೂರು ಜೊತೆ ಇತರ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎಂದು ಸಚಿವ ಎಂ ಬಿ ಪಾಟೀಲ್ ತಿಳಿಸಿದರು.
ಇದನ್ನೂ ಓದಿ : ಶಿವಮೊಗ್ಗ ವಿಮಾನ ನಿಲ್ದಾಣ ನಿರ್ವಹಣೆಗೆ ಒಪ್ಪಿಗೆ ಸಿಕ್ಕಿದೆ: ಸಚಿವ ಎಂ.ಬಿ.ಪಾಟೀಲ್