ಬೆಂಗಳೂರು: ಜನವರಿ 28 ರಿಂದ ಫೆಬ್ರವರಿ 5ರ ವರೆಗೆ ವಿಧಾನಮಂಡಲ ಜಂಟಿ ಅಧಿವೇಶನ ನಡೆಸಲು ನಿರ್ಧರಿಸಲಾಗಿದೆ. ಮಾರ್ಚ್ನಲ್ಲಿ ಬಜೆಟ್ ಅಧಿವೇಶನ ನಡೆಸಲು ಉದ್ದೇಶಿಸಲಾಗಿದೆ ಎಂದು ಸಚಿವ ಮಾಧುಸ್ವಾಮಿ ತಿಳಿಸಿದರು.
ವಿಧಾನಸೌಧದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ನಂತರ ಮಾಹಿತಿ ನೀಡಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ ಮಾಧುಸ್ವಾಮಿ, ಕೆಎಂಸಿ ಕಾಯ್ದೆಗೆ ತಿದ್ದುಪಡಿ ಮಾಡಿರುವುದರಿಂದ ಇನ್ನು ಮುಂದೆ ವಸತಿ ಪ್ರದೇಶಗಳಲ್ಲಿ ಪ್ರಸ್ತುತ ಇದ್ದ 0.2 ತೆರಿಗೆಯನ್ನು 1.5ಕ್ಕೆ ಹೆಚ್ಚಳ ಮಾಡಲಾಗುವುದು ಎಂದರು.
ಖಾಲಿ ನಿವೇಶನಕ್ಕೆ ಪ್ರಸ್ತುತ ಶೇ 0.2 ತೆರಿಗೆ ವಿಧಿಸಲಾಗುತ್ತಿತ್ತು. ಇದು ಕೂಡ ಮುಂದಿನ ದಿನಗಳಲ್ಲಿ ಶೇ 3ಕ್ಕೆ ಏರಿಕೆಯಾಗಲಿದೆ. ಇದುವರೆಗೆ 1000 ಚದರ ಅಡಿ ಖಾಲಿ ನಿವೇಶನಗಳಿಗೆ ಯಾವುದೇ ರೀತಿಯ ತೆರಿಗೆಯನ್ನು ವಿಧಿಸಲಾಗುತ್ತಿರಲಿಲ್ಲ. ಇನ್ನು ಮುಂದೆ 1000 ಚದರ ಅಡಿಗಿಂತ ಹೆಚ್ಚಿನ ಖಾಲಿ ನಿವೇಶನಗಳಿಗೆ ತೆರಿಗೆಯನ್ನು ಮಾರುಕಟ್ಟೆ ದರಕ್ಕೆ ಅನುಗುಣವಾಗಿ ವಿಧಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.
ಪೊಲೀಸರಿಗೆ ವಸತಿ ಗೃಹ ನಿರ್ಮಾಣ
ರಾಜ್ಯದಲ್ಲಿ ಸುಮಾರು 2 ಸಾವಿರ ಕೋಟಿ ರೂ. ವೆಚ್ಚದಲ್ಲಿ 10,034 ಪೊಲೀಸ್ ವಸತಿ ಗೃಹಗಳನ್ನು ನಿರ್ಮಾಣ ಮಾಡಲು ತೀರ್ಮಾನಿಸಲಾಗಿದೆ. ಇದು 5 ವರ್ಷದ ಯೋಜನೆಯಾಗಿದೆ ಎಂದು ತಿಳಿಸಿದರು.
ವಿಕಲಚೇತನ, ಹಿರಿಯ ನಾಗರಿಕರ ಸಬಲೀಕರಣ ಕಾಯಿದೆಗೆ ತಿದ್ದುಪಡಿ ಮಾಡಲಾಗಿದ್ದು, ನೇರ ನೇಮಕಾತಿಗೆ ಅವಕಾಶ ಕಲ್ಪಿಸಲಾಗಿದೆ. ಕೆಳಹಂತದಿಂದ ಪ್ರಥಮ ದರ್ಜೆ ಸಹಾಯಕರ ನೇಮಕಾತಿ ಮಾಡಿಕೊಳ್ಳಲು ಇದರಿಂದ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಆದಿಚುಂಚನಗಿರಿ ಪೀಠಾಧ್ಯಕ್ಷರಾಗಿದ್ದ ಶ್ರೀ ಬಾಲಗಂಗಧರನಾಥ ಸ್ವಾಮೀಜಿಯವರ ಹುಟ್ಟೂರಾದ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನ ಬಾನಂದೂರಿನಲ್ಲಿ ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ಪಾರಂಪರಿಕ ಮತ್ತು ಸಾಂಸ್ಕೃತಿಕ ತಾಣ ನಿರ್ಮಿಸಲು ನಿರ್ಧರಿಸಲಾಗಿದೆ. ಅದೇ ರೀತಿ ಚಿತ್ರದುರ್ಗದ ಮುರುಘಾ ಮಠದಲ್ಲಿ 325 ಅಡಿ ಬಸವೇಶ್ವರ ಪುತ್ಥಳಿಯನ್ನು 15 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವುದು. ಈಗಾಗಲೇ 10 ಕೋಟಿ ರೂ. ಅನುದಾನ ನೀಡಲಾಗಿದ್ದು, ಉಳಿದ 5 ಕೋಟಿ ಹಣ ಬಿಡುಗಡೆಗೆ ಸಂಪುಟ ಅನುಮತಿ ನೀಡಿದೆ ಎಂದರು.
ಬರಗಾಲಕ್ಕೆ ತುತ್ತಾಗಿದ್ದ ತುಮಕೂರು ಜಿಲ್ಲೆ ತಿಪಟೂರು ತಾಲೂಕಿನ 96 ಕೆರೆಗಳಿಗೆ 200 ಕೋಟಿ ರೂ. ವೆಚ್ಚದಲ್ಲಿ ನೀರು ತುಂಬಿಸುವ ತೀರ್ಮಾನ ಮಾಡಲಾಗಿದೆ. ದಾವಣಗೆರೆ ಜಿಲ್ಲೆ ಹಾನಗೋಡಿನಲ್ಲಿ ಕ್ರಷರ್ ಘಟಕ ನಿರ್ಮಾಣ ಮಾಡಲು ಖಾಸಗಿ ಸಂಸ್ಥೆಗೆ 30 ವರ್ಷದ ಭೋಗ್ಯಕ್ಕೆ 12 ಎಕರೆ ಜಮೀನನ್ನು ಮಂಜೂರು ಮಾಡಲು ಸಂಪುಟ ಸಭೆ ಒಪ್ಪಿಗೆ ನೀಡಿದೆ. ಕೋವಿಡ್ ವೇಳೆ ರೇಷ್ಮೆ ಗೂಡಿಗೆ ಧಾರಣೆ ಕುಸಿದಿತ್ತು. ಅದಕ್ಕಾಗಿ 15 ಕೋಟಿ ರೂ. ಅನುದಾನ ನೀಡಲು ಸಮ್ಮತಿಸಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದೇನೆ : ಹೆಚ್. ನಾಗೇಶ್