ಬೆಂಗಳೂರು: ನಾನು ರಾಜೀನಾಮೆ ಕೊಡುವ ಪ್ರಶ್ನೆ ಉದ್ಬವಿಸಲ್ಲ. ರಾಜೀನಾಮೆ ಕೊಡುವ ತಪ್ಪನ್ನು ಮಾಡಿಲ್ಲವೆಂದು ಕಾನೂನು ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ. ಮಾಧುಸ್ವಾಮಿ ಸಮರ್ಥನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಇಂದು ಸಂಜೆ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಿನ್ನೆ ಕೋಲಾರದಲ್ಲಿ ಮಹಿಳೆಯನ್ನು ನಿಂದಿಸಿದ್ದು ತಪ್ಪು. ನಾನು ಹಾಗೆ ಮಾತನಾಡುವಂತೆ ಅವರು ಪ್ರೇರೇಪಿಸಿದರು. ನನ್ನ ಈ ಮಾತಿನಿಂದ ಆ ಹೆಣ್ಣು ಮಗಳ ಭಾವನೆಗೆ ಧಕ್ಕೆಯಾಗಿದ್ದರೆ, ನಾನು ಕ್ಷಮೆ ಕೇಳುತ್ತೇನೆ ಎಂದರು.
ಒಬ್ಬ ಸಚಿವರನ್ನು ಕತ್ತೆ ಕಾಯುತ್ತಿದ್ದಿರಾ ಅಂತ ಪ್ರಶ್ನಿಸಿದ್ರು. ಒಬ್ಬ ಮಿನಿಸ್ಟರ್ ಆಗಿ ಇದನ್ನು ಕೇಳಿಸಿಕೊಂಡು ಸುಮ್ಮನೆ ಬರುವುದಕ್ಕೆ ಆಗುತ್ತಾ? ಅವರು ಕೇಳಿದ್ದಕ್ಕೆ ನಾನು ಸಮಜಾಯಿಷಿ ಕೊಟ್ಟಿದ್ದೆ. ನಮ್ಮ ಕಾರ್ಯದರ್ಶಿ ಕೂಡ ಎರಡು ಮೂರು ನಿಮಿಷ ಮಾತನಾಡಿದರು. ಆ ಮಹಿಳೆಯು ನೂರಾರು ಎಕರೆ ಜಾಗ ಒತ್ತುವರಿಯಾಗಿದೆ. ಅದರ ಬಗ್ಗೆ ಕ್ರಮ ಕೈಗೊಂಡಿಲ್ಲ ಅಂದರು. ಅದಕ್ಕೆ ನಾನು ನನಗೆ ಕಮಾಂಡ್ ಬೇಡ, ನಾನು ಕೆಟ್ಟವನಾಗಬೇಕಾಗುತ್ತದೆ ಅಂತ ಹೇಳಿದ್ದೆ. ಸಾರ್ವಜನಿಕ ಸ್ಥಳಗಳಲ್ಲಿ ಆ ರೀತಿ ಹೇಳಿದರೆ ನಾನು ಏನ್ಮಾಡ್ಬೇಕು? ನಾನು ಮಾತನಾಡಿದ್ದು ತಪ್ಪು. ಸ್ಪಷ್ಟವಾಗಿ ಹೇಳಿದ್ದೇನೆ. ನಾನು ಯಾರನ್ನೂ ಅವಹೇಳನ ಮಾಡಲಿಲ್ಲ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಯ್ತು. ಅದಕ್ಕೆ ಮುಚ್ಚಮ್ಮ ಬಾಯಿ, ನಡಿ ರಾಸ್ಕಲ್ ಅಂದಿದ್ದು ನಿಜ ಎಂದರು.
ಇದೇ ವೇಳೆ ರಾಜೀನಾಮೆಗೆ ಒತ್ತಾಯಿಸುತ್ತಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದ ಮಾಧುಸ್ವಾಮಿ, ಒಬ್ಬ ಮಹಿಳೆಯನ್ನು ಬೈದಿದ್ದೇನೆ, ಅದು ತಪ್ಪು. ನಾನು ಮಹಿಳೆ ಅಂತ ಅಲ್ಲಿ ಮಾತನಾಡಿಲ್ಲ, ಒಬ್ಬ ವ್ಯಕ್ತಿ ಅಂತ ಮಾತನಾಡಿದ್ದೇನೆ. ಸರ್ಕಾರಕ್ಕೆ ಮುಜುಗರ ತರುವ ಕೆಲಸವನ್ನು ನಾನು ಮಾಡಿಲ್ಲ. ನನ್ನ ರಾಜೀನಾಮೆಯನ್ನು ಸಿದ್ದರಾಮಯ್ಯನವರು ಕೇಳುವಂತದ್ದೇನು ಅಲ್ಲವೆಂದು ಹೇಳಿದರು.
ಸಾರ್ವಜನಿಕವಾಗಿ ನನ್ನ ಮೇಲೆ ಅಟ್ಯಾಕ್ ಮಾಡಿದರೆ ಹೇಗೆ? ನಾನು ಸರ್ಕಾರಕ್ಕೆ ಮುಜುಗರ ತರುವ ಕೆಲಸ ಮಾಡಿಲ್ಲ. ಬೇಕಾದರೆ ಸಿಎಂ ಅವರೇ ಇದರ ಬಗ್ಗೆ ಹೇಳಲಿ. ಇತ್ತೀಚೆಗೆ ಸರ್ಕಾರಕ್ಕೆ ಮುಜುಗರ ಮಾಡ್ತೇನೆ ಅನ್ನೋದು ಸುಳ್ಳು ಎಂದು ಅವರು ಸ್ಪಷ್ಟಪಡಿಸಿದರು.